ಸಾರಾಂಶ
ಮುಖ್ಯಮಂತ್ರಿ ಪಟ್ಟದ ಕುರಿತು ಚರ್ಚೆಗಳು ಮತ್ತೆ ಗರಿಗೆದರಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಶಾಸಕ ಶಿವಗಂಗಾ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರ ಬ್ಯಾಟ್ ಬೀಸಿದ್ದಾರೆ.
ಕಾರ್ಕಳ : ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾರ್ಕಳ ಗಾಂಧಿ ಮೈದಾನದಲ್ಲಿ ಭಾನುವಾರ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮ ಏರ್ಪಾಡಿಸಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಪ್ಪ ಮೊಯ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ವೀರಪ್ಪ ಮೊಯ್ಲಿ ಅವರು, ‘ಮುಖ್ಯಮಂತ್ರಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಬೇಡಿ, ಮುಂದಿನ ಮುಖ್ಯಮಂತ್ರಿ ನೀವೇ ಆಗಿದ್ದೀರಿ’ ಎಂದು ಶಿವಕುಮಾರ್ ಸಮ್ಮುಖದಲ್ಲೇ ಹೇಳಿದರು.
ಇದು ಸಂಚಲನಕ ಮೂಡಿಸಿತು,‘ಡಿ.ಕೆ. ಶಿವಕುಮಾರ್ ಗೆ ಪ್ರಥಮ ಬಾರಿ ಎಂಎಲ್ಎ ಟಿಕೆಟ್ ಕೊಡಿಸಿದ್ದು ನಾನು. ಈಗ ಶಿವಕುಮಾರ್ ಯಶಸ್ವಿ ನಾಯಕರಾಗಿ ಮೂಡಿ ಬಂದಿದ್ದಾರೆ. ಮುಖ್ಯಮಂತ್ರಿ ಹುದ್ದೆ ಯಾರೋ ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರೋ ಶಕ್ತಿ. ಡಿಕೆಶಿ ಮುಖ್ಯಮಂತ್ರಿಯಾಗುವುದು ತೀರ್ಮಾನ ಆಗಿರುವ ವಿಚಾರ’ ಎಂದರು.ಡಿಕೆಶಿ ಗೊಮ್ಮಟನ ಹಾಗೆ ಬೆಳೆಯಲಿ:‘ಕಾರ್ಕಳ ಗೊಮ್ಮಟೇಶ್ವರನ ಪುಣ್ಯಭೂಮಿ. ಶಿವಕುಮಾರ ಗೊಮ್ಮಟೇಶ್ವರನ ಹಾಗೆ ಎತ್ತರಕ್ಕೆ ಬೆಳೆಯಲಿ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿದ್ದಾಗ ಸಂಚಲನ ಮೂಡಿಸಿದವರು. ರಾಷ್ಟ್ರದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕ. ಪಕ್ಷಕ್ಕೆ ಒಳ್ಳೆಯ ನಾಯಕತ್ವ ಕೊಟ್ಟಿದ್ದಾರೆ. ಸಂಘಟನೆ ಮಾಡಿದ್ದಾರೆ’ ಎಂದು ಹಾಡಿ ಹೊಗಳಿದರು.
ರಕ್ತದಲ್ಲಿ ಬೆರೆವೆ, ವರ್ಷದಲ್ಲಿ ಡಿಕೆಶಿ ಸಿಎಂ
ದಾವಣಗೆರೆ‘ರಕ್ತದಲ್ಲಿ ಬೇಕಾದರೂ ಇವಾಗಲೇ ಬರೆದು ಕೊಡುತ್ತೇನೆ. ಡಿಸೆಂಬರ್ ಒಳಗಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮತ್ತೊಮ್ಮೆ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಗುಲ್ಲೆಬ್ಬಿಸಿರುವ ‘ನವೆಂಬರ್ ಕ್ರಾಂತಿ’ ಹಾಗೂ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿರುವ ದಲಿತ ಸಿಎಂ ಕೂಗು ಮಧ್ಯೆಯೇ ಡಿಸಿಎಂ ಶಿವಕುಮಾರ್ ಅವರ ಪರಮಾಪ್ತ ಶಿವಗಂಗಾ ನೀಡಿದ ಹೇಳಿಕೆ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ.ಈ ಹಿಂದೆ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆ ಕಳೆದ ಜನವರಿಯಲ್ಲಿ ಡಿ.ಕೆ.ಶಿವಕುಮಾರ್ ಶೀಘ್ರ ಮುಖ್ಯಮಂತ್ರಿಯಾಗಲಿರೆ ಎಂದು ಶಿವಗಂಗಾ ಹೇಳಿದ್ದರು.
ಅವರು ಮತ್ತೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ ಸಾಕಷ್ಟು ದುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಾರು 80 ಶಾಸಕರು ಗೆಲ್ಲುವಲ್ಲಿ ಅವರ ಪಾತ್ರ ಬಹಳಷ್ಟು ಇದೆ. ಶಿವಕುಮಾರ ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ’ ಎಂದರು.‘ಡಿಕೆಶಿ 86 ಇದ್ದ ವಿಧಾನಸಭೆ ಕಾಂಗ್ರೆಸ್ ಸದಸ್ಯರ ಸಂಖ್ಯೆ 140ಕ್ಕೆ ಏರಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಶ್ರಮಿಸಿ 9 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವಿಗೆ ಕಾರಣರಾಗಿದ್ದಾರೆ. ಪಕ್ಷ ಸಂಘಟನೆ ಮಾಡಿದ್ದಾರೆ.
ದುಡ್ಡು ಖರ್ಚು ಮಾಡಿದ್ದಾರೆ. ತ್ಯಾಗ ಮಾಡಿದ್ದಾರೆ. ಇಷ್ಟಾಗಿಯೂ ಸಮಾಧಾನವಾಗಿದ್ದಾರೆ. ಇದನ್ನು ವೀಕ್ ನೆಸ್ ಅಂದುಕೊಳ್ಳಬೇಡಿ’ ಎಂದು ಶಿವಗಂಗಾ ಗುಡುಗಿದರು.‘ನಮ್ಮ ಹೈಕಮಾಂಡ್ ಎಲ್ಲ ಕೆಲಸ, ಕಾರ್ಯ ನೋಡುತ್ತಿದೆ. ನಾವೆಲ್ಲಾ ಡಿ.ಕೆ.ಶಿವಕುಮಾರ್ ಜೊತೆಗೆ ಇರುತ್ತೇವೆ. ಅವರಿಗೆ ನ್ಯಾಯ ಕೊಡದಿದ್ದರೆ ನಾವು ಪಕ್ಷದಲ್ಲಿ ಇದ್ದರೂ ವೇಸ್ಟ್’ ಎಂದು ಶಿವಗಂಗಾ ಹೇಳಿದರು.ಕೇಂದ್ರ ಸಚಿವ ಅಮಿತಾ ಶಾ ಭಾಗವಹಿಸಿದ್ದ ಈಶ ಫೌಂಡೇಶನ್ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಿವಗಂಗಾ ಸಮರ್ಥಿಸಿಕೊಂಡರು.-
ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳಿಸಚಿವ ಕೆ.ಎನ್. ರಾಜಣ್ಣ ಕೆಪಿಸಿಸಿ ಅದ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಬಗ್ಗೆ ನೀಡುತ್ತಿರುವ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ, ನಮ್ಮ ಸರ್ಕಾರಕ್ಕೆ ಭಾರಿ ಮುಜುಗರವಾಗುತ್ತಿದೆ. ಹೈಕಮಾಂಡ್ ಇದನ್ನೆಲ್ಲಾ ಗಮನಿಸಿ, ರಾಜಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಿಂತಲೂ ಯಾರೂ ದೊಡ್ಡವರಲ್ಲ. ಪಕ್ಷವೇ ಎಲ್ಲರಿಗಿಂತ ದೊಡ್ಡದು.
- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ