ರಾಜ್ಯಾದ್ಯಂತ ಈಗ ವಿದ್ಯುತ್‌ ಕಣ್ಣಾಮುಚ್ಚಾಲೆ! ವಿದ್ಯುತ್‌ ಬೇಡಿಕೆ 2,000 ಮೆಗಾ ವ್ಯಾಟ್‌ನಷ್ಟು ಹೆಚ್ಚಳ

| N/A | Published : Apr 04 2025, 10:59 AM IST

Delhi Electricity Regulatory Commission

ಸಾರಾಂಶ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಆಗದ ಹಿನ್ನೆಲೆಯಲ್ಲಿ ಎಸ್ಕಾಂಗಳು ಅನಿಯಮಿತ ವಿದ್ಯುತ್‌ ಕಡಿತದ ಮೊರೆ ಹೋಗಿವೆ. ಪರಿಣಾಮ ರಾಜ್ಯಾದ್ಯಂತ ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿದೆ

 ಶ್ರೀಕಾಂತ್‌ ಎನ್. ಗೌಡಸಂದ್ರ

ಬೆಂಗಳೂರು :  ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಆಗದ ಹಿನ್ನೆಲೆಯಲ್ಲಿ ಎಸ್ಕಾಂಗಳು ಅನಿಯಮಿತ ವಿದ್ಯುತ್‌ ಕಡಿತದ ಮೊರೆ ಹೋಗಿವೆ. ಪರಿಣಾಮ ರಾಜ್ಯಾದ್ಯಂತ ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿದೆ.

ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಕಳೆದ ವರ್ಷಕ್ಕಿಂತ ಸುಮಾರು 2000 ಮೆ.ವ್ಯಾಟ್‌ನಷ್ಟು ಹೆಚ್ಚಾಗಿದೆ. ಕಳೆದ ಫೆಬ್ರವರಿಯಲ್ಲಿ ಗರಿಷ್ಠ ಬೇಡಿಕೆ 18350 ಮೆ.ವ್ಯಾಟ್‌ ತಲುಪಿದ್ದರೆ, ಮಾ.7 ರಂದು ಗರಿಷ್ಠ ವಿದ್ಯುತ್‌ ಬೇಡಿಕೆ 18395 ಮೆ.ವ್ಯಾಟ್‌ ತಲುಪಿ ದಾಖಲೆ ನಿರ್ಮಾಣ ಮಾಡಿತ್ತು.

ಆ ಬಳಿಕವೂ ದಿನೇ ದಿನೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಬೇಡಿಕೆ 18,500 ಮೆ.ವ್ಯಾಟ್‌ ಗಿಂತಲೂ ಹೆಚ್ಚಾಗಿದ್ದರೂ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆ ಸಾಧ್ಯವಾಗುತ್ತಿಲ್ಲ. 16000 ಮೆ.ವ್ಯಾಟ್‌ನಿಂದ 17300 ಮೆ.ವ್ಯಾಟ್‌ನಷ್ಟು ಮಾತ್ರ ವಿದ್ಯುತ್‌ ಪೂರೈಸಲಾಗುತ್ತಿದ್ದು, ಮಾ.23ರಂದು ಅಂತೂ ಗರಿಷ್ಠ 14,849 ಮೆ.ವ್ಯಾಟ್‌ ಮಾತ್ರ ಪೂರೈಸಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಎಸ್ಕಾಂಗಳು ಒಂದಲ್ಲಾ ಒಂದು ಪ್ರದೇಶದಲ್ಲಿ ಅನಿಯಮಿತ ವಿದ್ಯುತ್‌ ಕಡಿತ ಮಾಡುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸ್ಕಾಂಗಳು ಮಳೆ, ಗಾಳಿ, ನಿರ್ವಹಣೆ ಮತ್ತಿತರ ಕಾರಣ ನೀಡಿ ವಿದ್ಯುತ್‌ ಕಡಿತ ಮಾಡುತ್ತಿವೆ. ಅಧಿಕೃತವಾಗಿ ವಿದ್ಯುತ್‌ ಕಡಿತ ಮಾಡುವ ಬದಲು ಅನಿಯಮಿತ ವಿದ್ಯುತ್‌ ಕಡಿತಕ್ಕೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್‌ ಉತ್ಪಾದನೆ ಘಟಕಗಳಲ್ಲಿ ಸಮಸ್ಯೆ:

ಏ.2 ರಂದು ಬುಧವಾರ ಬೇಡಿಕೆಗಿಂತ ಕನಿಷ್ಠ 1,000 ಮೆ.ವ್ಯಾಟ್‌ನಿಂದ 1,200 ಮೆ.ವ್ಯಾಟ್‌ ಕಡಿಮೆ ವಿದ್ಯುತ್ ಪೂರೈಕೆ ಆಗಿದೆ. ಗರಿಷ್ಠ 17,330 ಮೆ.ವ್ಯಾಟ್‌ ಹಾಗೂ ಕನಿಷ್ಠ 11,388 ಮೆ.ವ್ಯಾಟ್ ಮಾತ್ರ ಪೂರೈಕೆ ಮಾಡಿದ್ದು, ರಾಜ್ಯದ ಒಟ್ಟು ಉತ್ಪಾದನೆ ಸಾಮರ್ಥ್ಯ 9,222 ಮೆ.ವ್ಯಾಟ್‌ ಇದ್ದರೂ 5,331 ಮೆ.ವ್ಯಾಟ್‌ ಮಾತ್ರ ಉತ್ಪಾದಿಸಲಾಗಿದೆ.

ಏ.3 ರಂದು ಕೆಪಿಟಿಸಿಎಲ್‌ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಏ.2 ರಂದು ಆರ್‌ಟಿಪಿಎಸ್‌ನ (ರಾಯಚೂರು ಉಷ್ಣವಿದ್ಯುತ್‌) ಎರಡು ಘಟಕ, ವೈಟಿಪಿಎಸ್‌ (ಯೆಮರಸ್‌) ಹಾಗೂ ಬಿಟಿಪಿಎಸ್‌ನ ತಲಾ ಒಂದು ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು.

ಇನ್ನು ರಾಜ್ಯಕ್ಕೆ ವಿದ್ಯುತ್‌ ಪೂರೈಕೆ ಮಾಡುತ್ತಿದ್ದ ತಮಿಳುನಾಡಿನ ನೈವೇಲಿ ಉಷ್ಣ ವಿದ್ಯುತ್‌ ಸ್ಥಾವರದ ಮೂರು ಘಟಕಗಳಲ್ಲಿ ಸಮಸ್ಯೆ ಹಿನ್ನೆಲೆ ವಿದ್ಯುತ್‌ ಪೂರೈಕೆ ಹಠಾತ್‌ ಸ್ಥಗಿತಗೊಂಡಿದೆ. ನೈವೇಲಿ ಟಿಎಸ್‌-2 ಹಾಗೂ ಕೈಗಾ ಅಣು ವಿದ್ಯುತ್‌ ಸ್ಥಾವರದ ತಲಾ ಒಂದು ಘಟಕದಲ್ಲಿ ನಿರ್ವಹಣೆಗಾಗಿ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

23.21 ದಶಲಕ್ಷ ಯುನಿಟ್‌ ವಿದ್ಯುತ್‌ ಖರೀದಿ:

ರಾಜ್ಯದಲ್ಲಿ ಕೇಂದ್ರ ಗ್ರಿಡ್‌, ಖಾಸಗಿ ಸಂಸ್ಥೆಗಳು ಹಾಗೂ ರಾಜ್ಯ ಉತ್ಪಾದನಾ ಸಂಸ್ಥೆಗಳು ಸೇರಿ ಒಟ್ಟು 35,394 ಗರಿಷ್ಠ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದೆ. ಆದರೆ, ಯುಪಿಸಿಎಲ್‌ನ 900 ಮೆ.ವ್ಯಾಟ್‌ ಸೇರಿ ಎನ್‌ಸಿಎ ಕೇಂದ್ರ ಗ್ರಿಡ್‌ನಿಂದ ಬುಧವಾರ 5,034, ಕೇಂದ್ರ ಉತ್ಪಾದನಾ ಸಂಸ್ಥೆ ಹಾಗೂ ರೈಲ್ವೆಯಿಂದ 6,020, ರಾಜ್ಯ ಉತ್ಪಾದನಾ ಸಂಸ್ಥೆಗಳಿಂದ 5,331 ಮೆ.ವ್ಯಾಟ್‌ ಸೇರಿ 17,330 ಮೆ.ವ್ಯಾಟ್‌ ಮಾತ್ರ ಗರಿಷ್ಠ ವಿದ್ಯುತ್‌ ಉತ್ಪಾದನೆಯಾಗಿದೆ.

ಒಟ್ಟಾರೆ 336.34 ದಶಲಕ್ಷ ಯುನಿಟ್ ವಿದ್ಯುತ್‌ ಪೂರೈಸಿದ್ದು ಈ ಪೈಕಿ ಯುಪಿಸಿಎಲ್‌ನಿಂದ 23.21 ದಶಲಕ್ಷ ಯುನಿಟ್‌ ವಿದ್ಯುತ್ ಖರೀದಿ ಮಾಡಲಾಗಿದೆ. ಪವರ್‌ ಬ್ಯಾಂಕಿಂಗ್‌ ಮೂಲಕ 17.84 ದಶಲಕ್ಷ ಯುನಿಟ್‌, ಡಿವಿಸಿಯಿಂದ 10.01 ದಶಲಕ್ಷ ಪಡೆಯಲಾಗಿದೆ.

ಹಲವು ಮಾರ್ಗಗಳಲ್ಲಿ ಪೂರೈಕೆ ವ್ಯತ್ಯಯ:

ನಿರ್ವಹಣೆ ಹಾಗೂ ಟ್ರಿಪ್‌ ಕಾರಣಕ್ಕಾಗಿ ಮೈಲಸಂದ್ರ 400 ಕೆ.ವಿ. ಮಾರ್ಗ, ಲಿಂಗಾಪುರ ಹಲವರ್ತಿ ನಡುವಿನ 220 ಕೆ.ವಿ, ಬೇಗೂರಿನಿಂದ ದೊಡ್ಡಬಳ್ಳಾಪುರ 220 ಕೆ.ವಿ. ಮಾರ್ಗ, ಅಂಬೆವಾಡಿ ಹಾಗೂ ನರೇಂದ್ರ ನಡುವಿನ 220 ಕೆ.ವಿ. ಮಾರ್ಗ, ಎಸ್‌ಜಿಎಸ್‌ ಹಾಗೂ ಶಿರಸಿಯಿಂದ 220 ಕೆ.ವಿ, ರಾಯಚೂರುನಿಂದ ಆರ್‌ಟಿಪಿಎಸ್‌ ನಡುವಿನ 400 ಕೆ.ವಿ ಮಾರ್ಗ, ಅಂಬೇವಾಡಿ ಕ್ಸೆಲ್ಡಂ ನಡುವಿನ 220 ಕೆ.ವಿ. ಮಾರ್ಗ, ಹುಬ್ಬಳ್ಳಿ ಹಾಗೂ ಶಿರಸಿ ನಡುವಿನ 220 ಕೆ.ವಿ. ಸೇರಿ ಹಲವು ಮಾರ್ಗಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ. ಪರಿಣಾಮ ಸಂಬಂಧಿಸಿದ ಭಾಗಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ತೀವ್ರ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ದೂರು ಹೆಚ್ಚಳ ಹಿನ್ನೆಲೆ ಬೆಸ್ಕಾಂನಿಂದ ವಾಟ್ಸಾಪ್‌ ಸಹಾಯವಾಣಿ

ವಿದ್ಯುತ್‌ ವ್ಯತ್ಯಯ ಕುರಿತು ಬೆಸ್ಕಾಂ ಸಹಾಯವಾಣಿ 1912ಗೆ ಬರುವ ದೂರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದ್ದು, ಕರೆಗಳ ಒತ್ತಡ ನಿಭಾಯಿಸಲು ಬೆಸ್ಕಾಂನ 8 ಜಿಲ್ಲೆಗಳಿಗೆ ಸಂಬಂಧಿಸಿ ಬೆಸ್ಕಾಂ 11 ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.

ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ವೃತ್ತ ವ್ಯಾಪ್ತಿಯವರು ಮೊಬೈಲ್‌ ಸಂಖ್ಯೆ 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013 , ಉತ್ತರ ವೃತ್ತ: 8277884014, ಕೋಲಾರ ಜಿಲ್ಲೆ: 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ: 8277884019, ಚಿತ್ರದರ್ಗ ಜಿಲ್ಲೆ: 8277884020 ಹಾಗೂ ದಾವಣಗೆರೆ ಜಿಲ್ಲೆಯವರು 8277884021 ಸಂಖ್ಯೆಗೆ ವಾಟ್ಸಾಪ್‌ ಸಂದೇಶ ಕಳುಹಿಸಿ ದೂರು ಸಲ್ಲಿಸಬಹುದು.