ವಿಕ್ರಂರಲ್ಲಿ ಕ್ರೂರತ್ವ ಇರಲಿಲ್ಲ- ನಾನು, ವಿಕ್ರಂ 2002ರಲ್ಲಿ ಒಳ್ಳೆ ಸ್ನೇಹಿತರು : ಮಾಜಿ ನಕ್ಸಲ್‌ ವೆಂಕಟೇಶ್‌

| Published : Nov 21 2024, 09:31 AM IST

 Vikram Gowda

ಸಾರಾಂಶ

ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರು ಸಮಾಜದ ಆಸ್ತಿ. ಸ್ವಾರ್ಥ ಇಲ್ಲದೆ ಕೆಲಸ ಮಾಡುವವರು. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾಜಿ ನಕ್ಸಲ್‌ ಅಗಲಗಂಜಿ ವೆಂಕಟೇಶ್ ಹೇಳಿದ್ದಾರೆ.

ಚಿಕ್ಕಮಗಳೂರು : ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರು ಸಮಾಜದ ಆಸ್ತಿ. ಸ್ವಾರ್ಥ ಇಲ್ಲದೆ ಕೆಲಸ ಮಾಡುವವರು. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾಜಿ ನಕ್ಸಲ್‌ ಅಗಲಗಂಜಿ ವೆಂಕಟೇಶ್ ಹೇಳಿದ್ದಾರೆ.

ಕೊಪ್ಪ ತಾಲೂಕಿನ ಅಗಲಗಂಜಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಂಗೌಡ, ನಾನು 2002ರಲ್ಲಿ ಒಳ್ಳೇಯ ಸ್ನೇಹಿತರು. ಅವರು, ಬಡತನದಿಂದ ಬಂದವರು. ಆತನಲ್ಲಿ ಕ್ರೂರತ್ವ ಇರಲಿಲ್ಲ, ನಗುನಗುತ ಮಾತನಾಡುವ ವ್ಯಕ್ತಿತ್ವ. ಸರ್ಕಾರ, ಅಧಿಕಾರ ವರ್ಗದವರೇ ಇಂದಿನ ಸ್ಥಿತಿಗೆ ಕಾರಣ. ಮಲೆನಾಡಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮತ್ತಷ್ಟು ಜಟಿಲ ಮಾಡುತ್ತಿದ್ದಾರೆ ಎಂದರು.

ನಕ್ಸಲೀಯರು ಬಂದೂಕಿನ ಮೂಲಕ ಉತ್ತರ ಕಂಡುಕೊಳ್ಳಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಪ್ರಜಾತಾಂತ್ರಿಕ, ಕಾನೂನಾತ್ಮಕ ಅಡಿಯಲ್ಲೇ ಈ ವ್ಯವಸ್ಥೆ ವಿರುದ್ಧ ಹೋರಾಡಬೇಕು. ಇನ್ನುಳಿದ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ನೇಮಿಸಿರುವ ವೇದಿಕೆ ಅಥವಾ ಕೋರ್ಟಿಗೆ ಶರಣಾಗಬೇಕು ಎಂದು ಮನವಿ ಮಾಡಿದರು.

ಗನ್ ಮೂಲಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸಿಗೋದೂ ಇಲ್ಲ. ಸರ್ಕಾರಕ್ಕೆ ಬಾಯಿ, ಕಿವಿ ಇಲ್ಲದಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಸರ್ಕಾರ ನಾನಾ ರೀತಿಯ ಯೋಜನೆಯನ್ನು ಜಾರಿಗೆ ತಂದು ಮಲೆನಾಡಿಗರ ಬದುಕುವ ಹಕ್ಕನ್ನೇ ಕಿತ್ತುಕೊಂಡಿದೆ. ಅಂದಿನ ಸಮಸ್ಯೆಗಳು ಇಂದಿಗೂ ಹಾಗೆಯೇ ಇವೆ. ಮತ್ತಷ್ಟು ಹೆಚ್ಚಾಗಿವೆ. ಆದರೆ, ಕಾಡಿನಲ್ಲಿ ಗನ್ ಹಿಡಿದು ಹೋರಾಟ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ, ನ್ಯಾಯ ಸಿಗಲ್ಲ ಎಂದು ಹೇಳಿದರು. ಸರ್ಕಾರ ಶರಣಾದವರಿಗೆ ಪರಿಹಾರದ ಪ್ಯಾಕೇಜ್‌ನಡಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.