ಸಾರಾಂಶ
ಮನೆಗೆ ಹೋಗಲು ರಿಕ್ಷಾದವರು ಒಪ್ಪದೆ ಅವಮಾನ ಅನುಭವಿಸಿದ್ದ ಮಂಗಳಮುಖಿಯೊಬ್ಬರು ಅದನ್ನೇ ತಮ್ಮ ಯಶಸ್ಸಿನ ಏಣಿಯನ್ನಾಗಿ ಮಾಡಿಕೊಂಡು ನಾಲ್ಕು ರಿಕ್ಷಾ ಖರೀದಿಸಿ, ಬಾಡಿಗೆ ನೀಡಿ, ತಮ್ಮ ಜೀವನೋಪಾಯದೊಂದಿಗೆ ಸಮಾಜಕ್ಕೂ ಮಾದರಿಯಾಗಿದ್ದಾರೆ.
ಮಂಗಳೂರು : ಮನೆಗೆ ಹೋಗಲು ರಿಕ್ಷಾದವರು ಒಪ್ಪದೆ ಅವಮಾನ ಅನುಭವಿಸಿದ್ದ ಮಂಗಳಮುಖಿಯೊಬ್ಬರು ಅದನ್ನೇ ತಮ್ಮ ಯಶಸ್ಸಿನ ಏಣಿಯನ್ನಾಗಿ ಮಾಡಿಕೊಂಡು ನಾಲ್ಕು ರಿಕ್ಷಾ ಖರೀದಿಸಿ, ಬಾಡಿಗೆ ನೀಡಿ, ತಮ್ಮ ಜೀವನೋಪಾಯದೊಂದಿಗೆ ಸಮಾಜಕ್ಕೂ ಮಾದರಿಯಾಗಿದ್ದಾರೆ.
ಇವರು ಅನಿ. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದವರು ಈಗ ಇಲ್ಲೇ ನೆಲೆ ನಿಂತಿದ್ದಾರೆ. ಬಿ.ಎ. ಪದವಿಯ ಬಳಿಕ ಬಿ.ಎಡ್.ನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬರೆದು ಬಳಿಕ ಶಿಕ್ಷಣ ಮೊಟಕುಗೊಳಿಸಿದ್ದರು. ಬಳಿಕ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಕಂಡುಕೊಂಡಿದ್ದರು. ಈ ಹಿಂದೆ ಅವರು ಪ್ರತಿದಿನ ಸಂಜೆ ಮನೆಗೆ ತೆರಳಲು ರಿಕ್ಷಾವನ್ನು ಅವಲಂಬಿಸಿದ್ದರು. ಆದರೆ, ಇವರನ್ನು ನೋಡಿದಾಗ ರಿಕ್ಷಾದವರು ನಿಲ್ಲಿಸುತ್ತಿರಲಿಲ್ಲ. ‘ಒಂದು ದಿನವಂತೂ ಸಂಜೆಯಿಂದ ರಾತ್ರಿವರೆಗೂ ಕಾದು ಯಾವ ರಿಕ್ಷಾದವರೂ ಬಾಡಿಗೆಗೆ ಕರೆದೊಯ್ಯಲು ಒಪ್ಪದಿದ್ದಾಗ ಗತಿಯಿಲ್ಲದೆ ರಾತ್ರಿ ನಡೆದುಕೊಂಡೇ ಮನೆ ತಲುಪಿದೆ. ಅಂದೇ ನಾನು ರಿಕ್ಷಾ ಖರೀದಿಸಬೇಕು ಎಂಬ ನಿರ್ಧಾರ ಮಾಡಿದೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಅವರು.
ಬಳಿಕ, ಬ್ಯಾಂಕ್‌ನಲ್ಲಿ ಸಾಲ ಮಾಡಿ, 4 ರಿಕ್ಷಾ ಖರೀದಿಸಿ, ದೇರಳಕಟ್ಟೆಯಲ್ಲಿ ಬಾಡಿಗೆಗೆ ನೀಡಿದರು. ಆ ಮೂಲಕ ಅವರಿಗೆ ಮಾಸಿಕವಾಗಿ ನಿಶ್ಚಿತ ಆದಾಯ ಬರುತ್ತಿದೆ. ಇವರು ತಮ್ಮ ರಿಕ್ಷಾದಲ್ಲಿ ತುಂಬು ಗರ್ಭಿಣಿಯರು, ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣ ಸೇವೆ ಕಲ್ಪಿಸಿದ್ದಾರೆ. ಈ ಮಧ್ಯೆ, ಕೆಲ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.