ಸಾರಾಂಶ
ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ವ್ಯಕ್ತಿಯೊಬ್ಬರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜಮೀನು ಖಾಲಿ ಮಾಡುವಂತೆ ಧಮಕಿ ಹಾಕಿ ಜೀವ ಬೆದರಿಕೆ - ಚಿತ್ರ ನಿರ್ಮಾಪಕ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ
ಬೆಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ವ್ಯಕ್ತಿಯೊಬ್ಬರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜಮೀನು ಖಾಲಿ ಮಾಡುವಂತೆ ಧಮಕಿ ಹಾಕಿ ಜೀವ ಬೆದರಿಕೆವೊಡ್ಡಿದ ಆರೋಪದಡಿ ಚಿತ್ರ ನಿರ್ಮಾಪಕ ಹಾಗೂ ಆತನ ಸಹಚರರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೀವನಗರ ನಿವಾಸಿ ರಾಮಮೂರ್ತಿ(70) ಎಂಬುವವರು ನೀಡಿದ ದೂರಿನ ಮೇರೆಗೆ ಕನ್ನಡದ ‘ದಿಯಾ’ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ, ಸಚಿನ್ ನಾರಾಯಣ್, ಸತ್ಯನಾರಾಯಣ ರೆಡ್ಡಿ ಹಾಗೂ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 190, 329(3), 351(2), 336(3), 352 ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು?:
ದೂರುದಾರ ರಾಮಮೂರ್ತಿ ಅವರು 2005ನೇ ಸಾಲಿನಲ್ಲಿ ಶಿವರಾಮ ರೆಡ್ಡಿ ಹಾಗೂ ಅವರ ಕುಟುಂಬದಿಂದ ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ 52ರಲ್ಲಿ 3.35 ಎಕರೆ ಜಮೀನನ್ನು ಶುದ್ಧ ಕ್ರಮಕ್ಕೆ ಖರೀದಿಸಿದ್ದರು. ಈ ಜಮೀನಿನಲ್ಲಿ ನರ್ಸರಿ ಮಾಡುವ ಉದ್ದೇಶದಿಂದ ಕಳೆದ ಆ.10ರಂದು ಶಶಿಕಲಾ ಮತ್ತು ಕೋದಂಡಚಾರಿ ಎಂಬುವವರಿಗೆ ಭೋಗ್ಯದ ಕರಾರು ಮಾಡಿಕೊಟ್ಟಿದ್ದರು.
ಅತಿಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ:
ಆ.13ರಂದು ಬೆಳಗ್ಗೆ ಸುಮಾರು 10.30ಕ್ಕೆ ರಾಮಮೂರ್ತಿ ಮತ್ತು ಶಶಿಕಲಾ ಅವರು ಜಮೀನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮೂರು ಕಾರುಗಳಲ್ಲಿ ಆರೋಪಿಗಳಾದ ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಐದಾರು ಮಂದಿ ಸಹಚರರು ಅಲ್ಲಿಗೆ ಬಂದಿದ್ದಾರೆ. ಬಳಿಕ ಏಕಾಏಕಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು, ನಕಲಿ ದಾಖಲೆ ತೋರಿಸಿ ಕೂಡಲೇ ಜಮೀನು ಖಾಲಿ ಮಾಡುವಂತೆ ಗಲಾಟೆ ಮಾಡಿದ್ದಾರೆ.
ಅಂತೆಯೆ ಶಶಿಕಲಾ, ಕೋದಂಡಚಾರಿ ಹಾಗೂ ರಾಮಮೂರ್ತಿಯವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಸಿದ್ದಾರೆ. ಈ ಜಮೀನು ಬಿಟ್ಟು ಕೋಡದಿದ್ದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.