ಬಿ.ಎಲ್‌.ಸಂತೋಷ್‌ ಕೇಸ್‌ ರದ್ದತಿಗೆ ತಿಮರೋಡಿ ಅರ್ಜಿ

| N/A | Published : Aug 23 2025, 09:30 AM IST

Mahesh Shetty Thimarodi

ಸಾರಾಂಶ

ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ತಮ್ಮ ವಿರುದ್ಧ ಬ್ರಹ್ಮಾವರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

  ಬೆಂಗಳೂರು :  ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ತಮ್ಮ ವಿರುದ್ಧ ಬ್ರಹ್ಮಾವರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಕ್ರಿಮಿನಲ್‌ ಅರ್ಜಿ ಸಲ್ಲಿಸಿರುವ ತಿಮರೋಡಿ, ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ಪೊಲೀಸರು ಮತ್ತು ಪ್ರಕರಣದ ದೂರದಾರ ರಾಜೀವ್‌ ಕುಲಾಲ್‌ ಅವರನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿದಿಯಾಗಬೇಕಿದೆ.

ದೂರುದಾರ ರಾಜೀವ್‌ ಕುಲಾಲ್‌ ಮತ್ತು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆತನ ವಿರುದ್ಧ ತಾನು ಯಾವುದೇ ಅವಹೇಳಕಾರಿ ಹೇಳಿಕೆ ನೀಡಿಲ್ಲ. ಮೂರನೇ ವ್ಯಕ್ತಿಯಾದ ಬಿ.ಎಲ್‌.ಸಂತೋಷ್‌ ಪರವಾಗಿ ಕುಲಾಲ್‌ ದೂರು ದಾಖಲಿಸಿದ್ದಾರೆ. ಅದನ್ನು ಆಧರಿಸಿ 2025ರ ಆ.21ರಂದು ತಮ್ಮನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಮರೋಡಿ ಆಕ್ಷೇಪಿಸಿದ್ದಾರೆ.

ಅಲ್ಲದೆ, ದೂರು ದಾಖಲಾದ ಕೂಡಲೇ ಪೊಲೀಸರು ಅತಿವೇಗದಲ್ಲಿ ತಮ್ಮ ಪತ್ನಿಗೆ ಮೊದಲ ನೋಟಿಸ್‌ ನೀಡಿದ್ದಾರೆ. ನಂತರ ಎರಡನೇ ನೋಟಿಸ್‌ ನೀಡಿದ್ದಾರೆ. ಈ ಎರಡೂ ನೋಟಿಸ್‌ ನೀಡುವಾಗ ನಿಯಮಗಳನ್ನು ಪಾಲಿಸಿಲ್ಲ. ಇನ್ನು ತಮ್ಮನ್ನು ಬಂಧಿಸಲು ಸೂಕ್ತ ಕಾರಣ ನೀಡಿಲ್ಲ. ಬಂಧನ ಮಾಹಿತಿ ಕುರಿತು ತಮ್ಮ ಕುಟುಂಬದವರಿಗೆ ಅರೆಸ್ಟ್‌ ಮೆಮೊ ಸಹ ನೀಡಿಲ್ಲ. ಇದರಿಂದ ಬಂಧನ ಪ್ರಕ್ರಿಯೆಯಲ್ಲಿ ದೋಷಪೂರಿತವಾಗಿದೆ. ಆದ್ದರಿಂದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ತಿಮರೋಡಿ ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣವೇನು?:

ಬಿಜೆಪಿ ಮಂಡಳಾಧ್ಯಕ್ಷ ರಾಜೀವ್‌ ಕುಲಾಲ್‌ ಬ್ರಹ್ಮಾವರ ಪೊಲೀಸ್‌ ಠಾಣೆಗೆ ಆ.18ರಂದು ದೂರು ನೀಡಿದ್ದರು. ಆ.16ರಂದು ಫೇಸ್‌ಬುಕ್‌ ನಲ್ಲಿ ವಿಡಿಯೋವೊಂದು ಪ್ರಸಾರವಾಗಿತ್ತು. ಅದನ್ನು ವೀಕ್ಷಿಸಿದಾಗ, ಮಹೇಶ್‌ ತಿಮರೋಡಿ ಮಾತನಾಡಿ ಬಿಜೆಪಿ ರಾಷ್ಟ್ರೀಯ ಮುಖಂಡ ಹಾಗೂ ಹಿಂದು ಧರ್ಮದ ನಾಯಕ ಬಿ.ಎಲ್‌.ಸಂತೋಷ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ವಿವಿಧ ಧರ್ಮಗಳ ಹಾಗೂ ಸಮುದಾದ ನಡುವೆ ದ್ವೇಷ ಉಂಟು ಮಾಡಲು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

ಈ ದೂರು ಆಧರಿಸಿ ಬ್ರಹ್ಮಾವರ ಠಾಣಾ ಪೊಲೀಸರು, ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕದಡಲು ಯತ್ನಿಸಿದ, ಉದ್ದೇಶಪೂರ್ವಕವಾಗಿ ಅವಮಾನಿಸಿದ ಮತ್ತು ಸುಳ್ಳು ಸುದ್ದಿ ಹಬ್ಬಿಸಿ ವಿವಿಧ ಸಮುದಾಯ ಹಾಗೂ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟುಮಾಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದು ಕೋರಿ ಮಹೇಶ್‌ ತಿಮರೋಡಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

Read more Articles on