ಅಲ್ಪಸಂಖ್ಯಾತ ಮಾನ್ಯತೆ ಸಡಿಲ ಬಗ್ಗೆ ಇಂದು ನಿರ್ಧಾರ -ಷರತ್ತು ಸಡಿಲಿಸುವ ವಿಧೇಯಕ ಬಗ್ಗೆ ಚರ್ಚೆ

| Published : Nov 14 2024, 10:22 AM IST

Janata Curfew Vidhansoudha

ಸಾರಾಂಶ

ವಕ್ಫ್‌ ಆಸ್ತಿ ವಿವಾದ ಹಾಗೂ ಗುತ್ತಿಗೆಗಳಲ್ಲಿ ಮುಸ್ಲಿಂ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಹೊಂದಿರಬೇಕಾಗಿದ್ದ ಷರತ್ತು ಸಡಿಲಿಕೆ ಮಾಡುವ ವಿಧೇಯಕವನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸರ್ಕಾರ ಸಜ್ಜಾಗಿದೆ.

ಬೆಂಗಳೂರು :  ವಕ್ಫ್‌ ಆಸ್ತಿ ವಿವಾದ ಹಾಗೂ ಗುತ್ತಿಗೆಗಳಲ್ಲಿ ಮುಸ್ಲಿಂ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಹೊಂದಿರಬೇಕಾಗಿದ್ದ ಷರತ್ತು ಸಡಿಲಿಕೆ ಮಾಡುವ ವಿಧೇಯಕವನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸರ್ಕಾರ ಸಜ್ಜಾಗಿದೆ.

ಮತೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತು ರದ್ದುಪಡಿಸಲು ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ 3ನೇ ಎರಡರಷ್ಟು ಭಾಗ ಅಲ್ಪಸಂಖ್ಯಾತರೇ ಇರಬೇಕು ಎಂಬ ನಿಯಮವನ್ನು ಹಾಗೆಯೇ ಉಳಿಸಿಕೊಳ್ಳುವ ತಿದ್ದುಪಡಿ ವಿಧೇಯಕದ ಪ್ರಸ್ತಾವನೆಯನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮತೀಯ ಅಥವಾ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಘೋಷಿಸಲ್ಪಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಆಯಾ ಶೈಕ್ಷಣಿಕ ವರ್ಷದ ಒಟ್ಟು ಪ್ರವೇಶಾತಿಯಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕು. ಇನ್ನು ಆಡಳಿತ ಮಂಡಳಿಯಲ್ಲಿ 3ನೇ 2ರಷ್ಟು ಅಲ್ಪಸಂಖ್ಯಾತರು ಇರಬೇಕು ಎಂದು 2014ರ ಜೂ.18ರಂದು ನಿಯಮ ಮಾಡಲಾಗಿತ್ತು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ರಷ್ಟು ಕರ್ನಾಟಕ ವಿದ್ಯಾರ್ಥಿಗಳು ಇರಬೇಕು. ಆಡಳಿತ ಮಂಡಳಿಯಲ್ಲಿ 3ನೇ ಎರಡರಷ್ಟು ಅಲ್ಪಸಂಖ್ಯಾತರು ಇರಬೇಕು ಎಂಬ ನಿಯಮವಿದೆ. ಇನ್ನು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಅಲ್ಪಸಂಖ್ಯಾತರಾಗಿರಬೇಕು. ಅದರಲ್ಲಿ ಶೇ.75ರಷ್ಟು ಕರ್ನಾಟಕದವರು ಆಗಿರಬೇಕು ಎಂಬ ಷರತ್ತು ಇದೆ.

ಈ ಷರತ್ತು ಸಡಿಲಿಸಲು 2023ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರು ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.

ಇದೀಗ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಸೀಮಿತವಾಗಿ ಕನಿಷ್ಠ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶಕ್ಕೆ ಇರುವ ಷರತ್ತು ರದ್ದುಪಡಿಸಲು ಹಾಗೂ ಆಡಳಿತ ಮಂಡಳಿಗಳಲ್ಲಿ 3ನೇ ಎರಡರಷ್ಟು ಅಲ್ಪಸಂಖ್ಯಾತರೇ ಇರಬೇಕು ಎಂಬ ನಿಯಮ ಉಳಿಸಿಕೊಳ್ಳಲು ಪ್ರಸ್ತಾವನೆ ಮಂಡನೆಯಾಗುತ್ತಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಇರುವ ವಿಶೇಷ ಸೌಲಭ್ಯ

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆಯುವ ಅಲ್ಪಸಂಖ್ಯಾತರ ಆಡಳಿತ ಮಂಡಳಿಯ ಶಾಲೆಗಳಿಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಿಗುವ ಎಲ್ಲಾ ಸೌಲಭ್ಯ ಸರ್ಕಾರದಿಂದ ಸಿಗುತ್ತದೆ. ಜತೆಗೆ ಅಲ್ಪಸಂಖ್ಯಾತರ ಇಲಾಖೆಯ ಅನುದಾನಗಳು ಲಭ್ಯವಾಗುತ್ತವೆ. ಷರತ್ತು ಸಡಿಲಿಸಿದರೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇಲ್ಲದಿದ್ದರೂ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತರು ಇರಬಹುದು. ತನ್ಮೂಲಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಎಲ್ಲಾ ಅಧಿಕಾರಗಳನ್ನೂ (ಸೀಟು ಹಂಚಿಕೆ, ಅಭಿವೃದ್ಧಿ ನಿಧಿ ಬಳಕೆ ಇತ್ಯಾದಿ) ಚಲಾಯಿಸಬಹುದು.

ಬಿಜೆಪಿ, ಜೆಡಿಎಸ್ ಅವಧಿಯ ಗಣಿ ತನಿಖೆಗೆ ಎಸ್‌ಐಟಿ?

ಇನ್ನು ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ 10-ಸಿ ಪ್ರವರ್ಗದ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಯ ವಿಶೇಷ ತನಿಖಾ ದಳ ರಚಿಸಲು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕುನ್ಹಾ ವರದಿ ಬಗ್ಗೆಯೂ ಚರ್ಚೆ?

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವ ನಿವೃತ್ತ ನ್ಯಾ. ಮೈಕಲ್‌ ಡಿ ಕುನ್ಹಾ ಅವರ ವಿಚಾರಣಾ ಆಯೋಗದ ಮಧ್ಯಂತರ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯೂ ಇದೆ. ಈಗಾಗಲೇ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಆದರೆ ಇದು ಅಧಿಕೃತ ಅಜೆಂಡಾದಲ್ಲಿ ಇನ್ನೂ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.