ಜ್ಞಾನಭಾರತಿಗೆ ನಾಗರಬಾವಿ ಕಡೆಯಿಂದ ಸಂಚಾರ ತಡೆಗೆ ವಿವಿ ನಿರ್ಧಾರ

| N/A | Published : Jul 29 2025, 08:12 AM IST

Bengaluru VV

ಸಾರಾಂಶ

 ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಾಹನ ದಟ್ಟಣೆ ತೀವ್ರತೆಯಿಂದ  ಅಡಚಣೆ, ಅಪಘಾತ ಪ್ರಕರಣ ಹಾಗೂ ಪರಿಸರ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದರಿಂದ  ವಾಹನ ಸಂಚಾರದ ಮೇಲೆ ಭಾಗಶಃ ನಿರ್ಬಂಧಿಸುವಂತೆ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಪತ್ರ ಬರೆಯಲು ವಿವಿಯ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ

  ಬೆಂಗಳೂರು :  ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಾಹನ ದಟ್ಟಣೆ ತೀವ್ರತೆಯಿಂದ ವಿದ್ಯಾರ್ಥಿಗಳ ಸಂಚಾರ, ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ, ಅಪಘಾತ ಪ್ರಕರಣ ಹಾಗೂ ಪರಿಸರ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದರಿಂದ ಕ್ಯಾಂಪಸ್‌ಗೆ ಸಾರ್ವಜನಿಕ ವಾಹನ ಸಂಚಾರದ ಮೇಲೆ ಭಾಗಶಃ ನಿರ್ಬಂಧಿಸುವಂತೆ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಪತ್ರ ಬರೆಯಲು ವಿವಿಯ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸಿದೆ.

ಈ ಸಂಬಂಧ ಸಿಂಡಿಕೇಟ್‌ನಲ್ಲಿ ಕೈಗೊಂಡಿರುವ ಅಧಿಕೃತ ನಿರ್ಣಯದ ಪ್ರತಿ ಲಭ್ಯವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ, ಶೈಕ್ಷಣಿಕ ಹಿತದೃಷ್ಟಿ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ನಾಗರಬಾವಿ ಕಡೆಯಿಂದ ಕ್ಯಾಂಪಸ್‌ ಪ್ರವೇಶಿಸುವ ರಸ್ತೆಯಲ್ಲಿ ಸಾರ್ವಜನಿಕ ವಾಹನ ನಿಷೇಧಿಸುವಂತೆ ಪತ್ರ ಬರೆಯಲು ನಿರ್ಧರಿಸಿದೆ.

ಜ್ಞಾನಭಾರತಿ ಆವರಣದಲ್ಲಿ ಪ್ರತಿನಿತ್ಯ 25 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ವಾಹನ ದಟ್ಟಣೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅಪಘಾತ ಪ್ರಕರಣಗಳಿಂದಾಗಿ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ, ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ವಿವಿಯೇ ಪರಿಹಾರ ಭರಿಸಿದ ಉದಾಹರಣೆಗಳಿವೆ. ಇದಲ್ಲದೇ ತ್ಯಾಜ್ಯವನ್ನು ಚೀಲ, ಕವರ್‌ನಲ್ಲಿ ತಂದು ಜನರು ಕ್ಯಾಂಪಸ್‌ ಒಳಗೆ ಎಸೆಯುತ್ತಿರುವುದರಿಂದ ಕ್ಯಾಂಪಸ್‌ ಆವರಣ ಹಾಳಾಗುತ್ತಿದ್ದು, ಇದು ವಿವಿಗೆ ಈಗಿರುವ ಉತ್ತಮ ನ್ಯಾಕ್‌ ಶ್ರೇಯಾಂಕ ಕಡಿಮೆಯಾಗುವ ಆತಂಕವೂ ಇದೆ. ಈ ಎಲ್ಲ ಕಾರಣಗಳಿಂದ ಕ್ಯಾಂಪಸ್‌ಗೆ ಸಾರ್ವಜನಿಕ ವಾಹನ ನಿಷೇಧಿಸಬೇಕೆಂದು ಅನೇಕ ಸಿಂಡಿಕೇಟ್‌ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿದ್ದಾರೆ.

ಮೊದಲ ಹಂತದಲ್ಲಿ ನಾಗರಬಾವಿ ಕಡೆಯಿಂದ ಕ್ಯಾಂಪಸ್‌ ಪ್ರವೇಶಿಸುವ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗಿಡ ನೆಡಲೂ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಒಪ್ಪಿಗೆ ಕಡ್ಡಾಯ

ಜ್ಞಾನಭಾರತಿ ವಾಯು ವಿಹಾರಿಗಳ ಸಂಘ ಸೇರಿದಂತೆ ಸಂಘ ಸಂಸ್ಥೆಗಳು ವಿವಿಯ ಜ್ಞಾನಭಾರತಿ ಆವರಣದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನಿರ್ಬಂಧಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕ್ಯಾಂಪಸ್‌ನಲ್ಲಿ ಯಾವುದೇ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳು ಗಿಡ ನೆಡುವುದಾದರೂ ಇನ್ನು ಮುಂದೆ ಸಿಂಡಿಕೇಟ್ ಪೂರ್ವಾನುಮತಿ ಪಡೆದುಕೊಳ್ಳಬೇಕು. ಅನಧಿಕೃತ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಪೊಲೀಸ್‌ ಇಲಾಖೆಗೆ ದೂರು ನೀಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ನೆಟ್‌-ಸ್ಲೆಟ್‌ ಅತಿಥಿ ಉಪನ್ಯಾಸಕರಿಗೂ 11 ತಿಂಗಳ ವೇತನ

ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವಂತೆಯೇ ಕೆ-ಸೆಟ್‌ ಮತ್ತು ನೆಟ್‌ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೂ ವರ್ಷದಲ್ಲಿ 11 ತಿಂಗಳ ಅವಧಿಗೆ ವೇತನ ನೀಡಲು ಸಿಂಡಿಕೇಟ್‌ ಸಭೆ ನಿರ್ಧರಿಸಿದೆ. ಅದೇ ರೀತಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 76 ದಿನಗೂಲಿ ನೌಕರರನ್ನು ಮುಂದಿನ ಒಂದು ವರ್ಷದ ಅವಧಿಗೆ ಪ್ರಸಕ್ತ ನೀಡುತ್ತಿರುವ ವೇತನ ಮತ್ತು ಭತ್ಯೆಯೊಂದಿಗೆ ಮುಂದುವರೆಸಲು ತೀರ್ಮಾನಿಸಲಾಗಿದೆ. ವಿವಿಯ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗಕ್ಕೆ ಸೂಚಿಸಲಾಗಿದೆ ಎಂದು ಕುಲಪತಿ ಡಾ.ಜಯಕರ ಸಭೆಯಲ್ಲಿ ತಿಳಿಸಿದರು.

Read more Articles on