ಸಾರಾಂಶ
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸೋದರಿಯರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಬೆಂಗಳೂರು : ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸೋದರಿಯರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಗೋವಿಂದಪುರದ ನಾಜಿಯಾ ಸುಲ್ತಾನ (35) ಹಾಗೂ ನಾಜಿಯಾ ಇರ್ಫಾನಾ (30) ಮೃತರು. ಘಟನೆ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕ ಗಾದಿಲಿಂಗ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋದರಿಯರು ಶನಿವಾರ ಬೆಳಗ್ಗೆ 11.30 ಸುಮಾರಿಗೆ ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ನಾಗವಾರ ಕಡೆಯಿಂದ ಹೆಗಡೆ ನಗರಕ್ಕೆ ತೆರಳುತ್ತಿದ್ದರು. ಇದೇ ವೇಳೆ ಥಣಿಸಂದ್ರದ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ತೆಗೆದುಕೊಂಡು ಬಿಬಿಎಂಪಿ ಲಾರಿ ಹೋಗುತ್ತಿತ್ತು. ಥಣಿಸಂದ್ರ ಮುಖ್ಯರಸ್ತೆಯ ಜ್ಯುಡಿಯಾ ಶೋರೂಂ ಮುಂದೆ ಸೋದರರಿಯರ ಸ್ಕೂಟರ್‌ಗೆ ಹಿಂದಿನಿಂದ ಈ ಲಾರಿ ಡಿಕ್ಕಿಯಾಗಿದೆ. ಆಗ ಆಯ ತಪ್ಪಿ ಸ್ಕೂಟರ್‌ನಿಂದ ಕೆಳಗೆ ಬಿದ್ದ ಸುಲ್ತಾನಾ ಹಾಗೂ ಇರ್ಫಾನಾ ಮೇಲೆ ಕಸದ ಲಾರಿ ಚಕ್ರಗಳು ಹರಿದಿವೆ. ತೀವ್ರವಾಗಿ ಗಾಯಗೊಂಡು ಸೋದರಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.