ಸಾರಾಂಶ
: ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ 12 ಮಂದಿ ವಿರುದ್ಧ ನ್ಯಾಯಾಲಯಕ್ಕೆ 3 ಸಾವಿರ ಪುಟಗಳ ಪ್ರಾಥಮಿಕ ಹಂತದ ಆರೋಪ ಪಟ್ಟಿಯನ್ನು ಸೋಮವಾರ ವಿಶೇಷ ತನಿಖಾ ತಂಡ ಸಲ್ಲಿಸಿದೆ.
ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ 12 ಮಂದಿ ವಿರುದ್ಧ ನ್ಯಾಯಾಲಯಕ್ಕೆ 3 ಸಾವಿರ ಪುಟಗಳ ಪ್ರಾಥಮಿಕ ಹಂತದ ಆರೋಪ ಪಟ್ಟಿಯನ್ನು ಸೋಮವಾರ ವಿಶೇಷ ತನಿಖಾ ತಂಡ ಸಲ್ಲಿಸಿದೆ. ಆದರೆ ಇದರಲ್ಲಿ ಅಕ್ರಮದಲ್ಲಿ ಪಾಲ್ಗೊಂಡ ಆರೋಪ ಹೊತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಮತ್ತು ಬಸನಗೌಡ ದದ್ದಲ್ ಹೆಸರು ಉಲ್ಲೇಖವಾಗಿಲ್ಲ.
ಮಾಜಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಈ ಇಬ್ಬರ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧೀಕ್ಷಕ ಪರಶುರಾಮ್, ಮಾಜಿ ಸಚಿವ ನಾಗೇಂದ್ರ ಆಪ್ತ ಬಳ್ಳಾರಿ ಜಿಲ್ಲೆಯ ನೆಕ್ಕುಂಟಿ ನಾಗರಾಜ್ ಹಾಗೂ ಹಣ ವರ್ಗಾವಣೆ ದಂಧೆ ಮಾಸ್ಟರ್ ಮೈಂಡ್ ಎನ್ನಲಾದ 'ಹೈದರಾಬಾದ್ ಗ್ಯಾಂಗ್'ನ ಸತ್ಯನಾರಾಯಣ ವರ್ಮಾ ಸೇರಿದಂತೆ 12 ಮಂದಿಯನ್ನು ಎಸ್‌ಐಟಿ ಬಂಧಿಸಿತ್ತು. ಇವರ ವಿರುದ್ಧ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಏಳು ಸಂಪುಟಗಳಲ್ಲಿ 3020 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಇನ್ನೂ ತಲೆಮರೆಸಿಕೊಂಡಿರುವ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಎಸ್‌ಐಟಿ ತನಿಖೆ ಮುಂದುವರೆಸಿದೆ.
84 ಕೋಟಿ ರು. ಅಕ್ರಮ ವರ್ಗ:
ನಿಗಮದಲ್ಲಿ 84 ಕೋಟಿ ರು. ಅಕ್ರಮ ವರ್ಗಾವಣೆ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ. ಕಳೆದ ಮಾರ್ಚ್ ಹಾಗೂ ಮೇ ತಿಂಗಳಲ್ಲಿ ನಡುವೆ ಬೆಂಗಳೂರಿನ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‌ನ ನಿಗಮದ ಖಾತೆಯಿಂದ ಹೈದರಾಬಾದ್‌ನ ರತ್ನಾಕರ್‌ಬ್ಯಾಂಕ್‌ಗೆ 89 ಕೋಟಿ ರು. ಅಕ್ರಮವಾಗಿ ವರ್ಗಾವಣೆಯಾಗಿತ್ತು. ನಂತರ ರತ್ನಾಕರ್ ಬ್ಯಾಂಕ್‌ನಿಂದ ಫಸ್ಟ್ ಫೈನಾನ್ಸ್ ಕೋ-ಆಪರೇಟಿವ್‌ನ 18 ನಕಲಿ ಖಾತೆಗಳಿಗೆ 84 ಕೋಟಿ ರು. ಹಣ ವರ್ಗಾವಣೆಯಾಗಿತ್ತು, ಈ ಹಣವನ್ನು 272 ಬೇನಾಮಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಹವಾಲಾ ಮೂಲಕ ಹೈದರಾಬಾದ್ ಗ್ಯಾಂಗ್ ನಗದು ಮಾಡಿತ್ತು ಎಂದು ಎಸ್‌ಐಟಿ ಹೇಳಿದೆ.
ಪ್ರಕರಣದ ಹಿನ್ನೆಲೆ:
ಕಳೆದ ಮೇ ತಿಂಗಳಲ್ಲಿ ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಲೆಕ್ಕ ಪತ್ರ ವಿಭಾಗದ ಅಧಿಕಾರಿ ಚಂದ್ರಶೇಖರ್‌ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರಣ ಪತ್ರದಲ್ಲಿ ವಾಲ್ಮೀಕಿ ನಿಗಮದ ಹಣ ಚರ್ಚೆಗೆ ಗ್ರಾಸವಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಿಐಡಿ ಡಿಜಿಪಿ ಉಸ್ತುವಾರಿ ಯಲ್ಲಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚಿಸಿತು.
ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ಬೆಂಗಳೂರಿನ ಹೈಗೌಂಡ್ಸ್, ವಿಜಯ ನಗರ, ಕೆ.ಪಿ.ಅಗ್ರಹಾರ ಹಾಗೂ ಶಿವಮೊಗ್ಗ ಠಾಣೆಗಳಲ್ಲಿ ಪ್ರತ್ಯೇಕವಾಗಿ 8 ಪ್ರಕರಣಗಳು ದಾಖಲಾಗಿದೆ. ಈಗ ಹೈಗೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ 89 ಕೋಟಿ ರು. ಹಣ ಅಕ್ರಮ ವರ್ಗಾವಣೆ ಸಂಬಂಧ ಮೊದಲ ಹಂತದ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇನ್ನುಳಿದಂತೆ ನಕಲಿ ದಾಖಲೆ ಸೃಷ್ಟಿ ಹಾಗೂ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆಗಳು ಪ್ರಗತಿಯಲ್ಲಿವೆ.
'ಇನ್ನೊಂದು ವಾರದಲ್ಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ' ಶಾಕಿಂಗ್ ಭವಿಷ್ಯ ನುಡಿದ ಛಲವಾದಿ ನಾರಾಯಣಸ್ವಾಮಿ!
ಕಮಿಷನ್ ಆಸೆಗೆ ಹಣ ವರ್ಗಾವಣೆ: ಬ್ಯಾಂಕ್ ನಲ್ಲಿನಿಗಮದ ಹಣ ಠೇವಣಿ ಇಟ್ಟರೆ ಕಮಿಷನ್ ಸಿಗಲಿದೆ ಎಂದು ಆಮಿಷವೊಡ್ಡಿ ಹೈದರಾಬಾದ್ ಗ್ಯಾಂಗ್‌ನ ಸತ್ಯನಾರಾಯಣ್ ವರ್ಮಾ ಹಾಗೂ ಆತನ ಸಹಚರರುಹಣದೋಚಿದ್ದರು. ಹಣದಾಸೆಯಿಂದ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರತುರಾಮ್ ಹಾಗೂ ಮಾಜಿ ಸಚಿವರ ಆಪ್ತ ನೆಕ್ಕುಂಟಿ ನಾಗರಾಜ್ ಈ ಕೃತ್ಯಕ್ಕೆ ಸಾಥ್ ಕೊಟ್ಟಿದ್ದರು ಎಂದು ಹೇಳಲಾಗಿದೆ.
ಮಾಜಿ ಸಚಿವರ, ಶಾಸಕರ ವಿರುದ್ಧ ತನಿಖೆ: ಇದೇ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಮತ್ತು ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು. ಈ ಇಬ್ಬರ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ವಿವರ
1. ಜೆ.ಜಿ.ಪದ್ಮನಾಭ, ಮಾಜಿ ಎಂಡಿ, ವಾಲ್ಮೀಕಿ ನಿಗಮ
2. ಪರಶುರಾಮ ದುರಣ್ಣನವರ್, ಲೆಕ್ಕಾಧೀಕ್ಷಕರು, ವಾಲ್ಮೀಕಿ ನಿಗಮ
3. ಸತ್ಯನಾರಾಯಣ ಇಟಕಾರಿ, ಅಧ್ಯಕ್ಷ, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
4. ನೆಕ್ಕುಂಟಿ ನಾಗರಾಜ್, ಮಾಜಿ ಸಚಿವ ನಾಗೇಂದ್ರರವರ ಪರಿಚಯಸ್ಥ
5. ನಾಗೇಶ್ವರ ರಾವ್, ನೆಕ್ಕುಂಟ ನಾಗರಾಜ್‌ನ ಭಾವಮೈದುನ
6. ಎಂ.ಚಂದ್ರಮೋಹನ್, ಹೈದರಾಬಾದ್
7. ಗಾದಿರಾಜು ಸತ್ಯನಾರಾಯಣ ವರ್ಮ, ಹೈದರಾಬಾದ್
8. ಜಗದೀಶ ಜಿ.ಕೆ., ಉಡುಪಿ
9. ತೇಜ ತಮ್ಮಯ್ಯ, ಬೆಂಗಳೂರು
10. ಪಿಟ್ಟಲ ಶ್ರೀನಿವಾಸ, ಗಚ್ಚಿಬೌಲಿ, ಆಂಧ್ರಪ್ರದೇಶ
11.ಸಾಯಿತೇಜ, ಹೈದರಾಬಾದ್
12. ಕಾಕಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ.
ಜಪ್ತಿ ವಿವರ
16.83 ಕೋಟಿ ನಗದು, 11.70 ಕೋಟಿ ಮೌಲ್ಯದ 16.256 ಕೆಜಿ ಚಿನ್ನ, 4.51 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಹಾಗೂ ಮರ್ಸಿಡಿಸ್ ಬೆಂಜ್ ಕಾರುಗಳು, ತನಿಖಾಧಿಕಾರಿಯ ಬ್ಯಾಂಕ್ ಖಾತೆಯಲ್ಲಿರುವ 3.19 ಕೋಟಿ ರು., ಇತರೆ ಬ್ಯಾಂಕ್ ಖಾತೆಗಳಲ್ಲಿ 13.72 ಕೋಟಿ ಮುಟ್ಟುಗೋಲು ಸೇರಿದಂತೆ ಒಟ್ಟು 49.96 ಕೋಟಿ ರು.