ಸಾರಾಂಶ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿಯಾಗುತ್ತಿರುವ ಡಾ। ಎಚ್.ಎಲ್.ನಾಗರಾಜ ಅವರಿಗೆ ಪೋಷಕರಿಂದ ರಕ್ತ ಸಂಬಂಧದ ತ್ಯಾಗಕ್ಕೆ ಸಂಬಂಧಿಸಿದ ವಿಧಿ-ವಿಧಾನಗಳು ಶನಿವಾರ ರಾತ್ರಿ ನಡೆದವು.
ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿಯಾಗುತ್ತಿರುವ ಡಾ। ಎಚ್.ಎಲ್.ನಾಗರಾಜ ಅವರಿಗೆ ಪೋಷಕರಿಂದ ರಕ್ತ ಸಂಬಂಧದ ತ್ಯಾಗಕ್ಕೆ ಸಂಬಂಧಿಸಿದ ವಿಧಿ-ವಿಧಾನಗಳು ಶನಿವಾರ ರಾತ್ರಿ ನಡೆದವು.
ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಗಂಗೆಪೂಜೆ, ಶಿವಪಾರ್ವತಿಯರ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಸಮಾರಾಧನ, ರಕ್ಷಾ ಬಂಧನ, ವಾಪನ, ಸ್ನಪನ, ಪೋಷಕರಿಂದ ರಕ್ತ ಸಂಬಂಧದ ತ್ಯಾಗ ಮತ್ತು ಉತ್ತರಾಧಿಕಾರಿಯನ್ನು ಸಮಾಜಕ್ಕೆ ಸಮರ್ಪಿಸುವ ವಿಧಿವಿಧಾನಗಳು ಜರುಗಿದವು.
ಭಾನುವಾರ ಬೆಳಗ್ಗೆ 10.30ಕ್ಕೆ ಮಠದ ಆವರಣದಲ್ಲಿ ನಡೆಯುವ ಪಟ್ಟಾಧಿಕಾರ ಮಹೋತ್ಸವದಲ್ಲಿ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರು ಉಪಸ್ಥಿತರಿರುತ್ತಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿರುವ 49 ವರ್ಷದ ನಾಗರಾಜ್ ಅವರು ಶ್ರೀಮಠದ ಉತ್ತರಾಧಿಕಾರಿಯಾಗಿ ‘ನಿಶ್ಚಲಾನಂದನಾಥ ಮಹಾಸ್ವಾಮೀಜಿ’ಯಾಗಿ ಮರುನಾಮಕರಣಗೊಳ್ಳಲಿದ್ದಾರೆ. ಮಠದ ಹಾಲಿ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರಿಗೆ 81 ವರ್ಷಗಳಾಗಿರುವ ಹಿನ್ನೆಲೆ ನೂತನ ಉತ್ತರಾಧಿಕಾರಿಯನ್ನು ನೇಮಿಸಲಾಗುತ್ತಿದೆ.