ಪತನಗೊಂಡ ಏರ್‌ ಇಂಡಿಯಾದ 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್‌ ಕುಮಾರ್‌ ಬದುಕುಳಿದ ಬಳಿಕ ವಿಮಾನಯಾನ ಕ್ಷೇತ್ರದಲ್ಲಿ 11ಎ ಮತ್ತು ತುರ್ತು ದ್ವಾರದ ಬಳಿಯ ಸೀಟುಗಳಿಗೆ ಭಾರಿ ಬೇಡಿಕೆ ಒದಗಿಬಂದಿದೆ.

ಕೋಲ್ಕತಾ: ಪತನಗೊಂಡ ಏರ್‌ ಇಂಡಿಯಾದ 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್‌ ಕುಮಾರ್‌ ಬದುಕುಳಿದ ಬಳಿಕ ವಿಮಾನಯಾನ ಕ್ಷೇತ್ರದಲ್ಲಿ 11ಎ ಮತ್ತು ತುರ್ತು ದ್ವಾರದ ಬಳಿಯ ಸೀಟುಗಳಿಗೆ ಭಾರಿ ಬೇಡಿಕೆ ಒದಗಿಬಂದಿದೆ.

ವಿಮಾನದಲ್ಲಿ ಪ್ರಯಾಣದ ವೇಳೆ ಏನಾದರೂ ತುರ್ತು ಪರಿಸ್ಥಿತಿ ಒದಗಿಬಂದರೆ 11ಎ ಸೀಟಿನಿಂದ ಹಾರುವುದು ಸುಲಭ ಮತ್ತು ತುರ್ತುದ್ವಾರದ ಪಕ್ಕವೇ ಸೀಟುಗಳು ಹೆಚ್ಚು ಸುರಕ್ಷಿತ ಎಂದುಕೊಂಡು ಹೆಚ್ಚಿನ ಜನರು ಈ ಸೀಟುಗಳನ್ನೇ ಬುಕ್‌ ಮಾಡಿ ಎಂದು ಟ್ರಾವೆಲ್‌ ಏಜೆಂಟ್‌ಗಳಿಗೆ ಬೇಡಿಕೆ ಇಡುತ್ತಿದ್ದಾರೆ.

ಇನ್ನು ಕೆಲವರು 11ಎ ಸೀಟು ತುರ್ತು ದ್ವಾರದ ಬಳಿ ಇಲ್ಲದಿದ್ದರೂ ಪರವಾಗಿಲ್ಲ. ಅದು ಅದೃಷ್ಟದ ಸಂಖ್ಯೆ ಅದೇ ಸೀಟು ಬುಕ್ ಮಾಡಿ, 11ಎ ಖಾಲಿ ಇಲ್ಲದಿದ್ದರೆ ಟಿಕೆಟ್‌ ಬೇಡ ಎಂದು ಕೇಳುತ್ತಿದ್ದಾರೆ ಎಂದು ಕೋಲ್ಕತಾದ ಟ್ರಾವೆಲ್‌ ಏಜೆಂಟ್‌ಗಳು ತಿಳಿಸಿದ್ದಾರೆ.

ಅಹಮದಾಬಾದ್‌ ದುರಂತಕ್ಕೂ ಮೊದಲು ತುರ್ತುದ್ವಾರದ ಬಳಿಯ ಸೀಟುಗಳನ್ನು ಕೇಳುವವರಿರಲಿಲ್ಲ. ಹೆಚ್ಚು ಉದ್ದವಿರುವ ಪ್ರಯಾಣಿಕರು ಮಾತ್ರ ಹೆಚ್ಚುವರಿ ಹಣ ಪಾವತಿಸಿ ಅಲ್ಲಿ ಸೀಟ್‌ ಮಾಡುತ್ತಿದ್ದರು. ಅಲ್ಲಿ ಹೆಚ್ಚಿನ ಭದ್ರತೆಯೇನು ಇಲ್ಲದಿದ್ದರೂ ಜನರು ಮಾತ್ರ ಮನಸ್ಸಿನ ನೆಮ್ಮದಿಗೆ ಅದೇ ಸೀಟು ಕೇಳುತ್ತಿದ್ದಾರೆ ಎಂದು ವರದಿಯಾಗಿದೆ. ಅದಕ್ಕಾಗಿ ದುಪ್ಪಟ್ಟು ಹಣವನ್ನು ಪಾವತಿಸಲು ಜನರು ಸಿದ್ಧರಿದ್ದಾರೆ ಎಂದು ಏಜೆಂಟ್‌ಗಳು ತಿಳಿಸಿದ್ದಾರೆ.