ವಕ್ಫ್‌: ಜೆಪಿಸಿಗೆ ಯತ್ನಾಳ್‌ ಟೀಂನಿಂದ ದಾಖಲೆ ಸಲ್ಲಿಕೆ - ಹಲವೆಡೆ ತೆರಳಿ 2500 ದಾಖಲೆ ಸಂಗ್ರಹಿಸಿದ್ದ ತಂಡ

| Published : Dec 05 2024, 11:04 AM IST

Basavana Gowda Patil Yatnal

ಸಾರಾಂಶ

ರಾಜ್ಯದಲ್ಲಿ ಭುಗಿಲೆದ್ದ ವಕ್ಫ್ ಭೂ ಕಬಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಪ್ರವಾಸದ ಮೂಲಕ ಸಂಗ್ರಹಿಸಿದ ಸುಮಾರು 2500 ದಾಖಲಾತಿಗಳ ವರದಿಯನ್ನು ಕೇಂದ್ರ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧಿಕಾರಿಗಳಿಗೆ ಸಲ್ಲಿಸಲಾಗಿದೆ

ನವದೆಹಲಿ : ರಾಜ್ಯದಲ್ಲಿ ಭುಗಿಲೆದ್ದ ವಕ್ಫ್ ಭೂ ಕಬಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಪ್ರವಾಸದ ಮೂಲಕ ಸಂಗ್ರಹಿಸಿದ ಸುಮಾರು 2500 ದಾಖಲಾತಿಗಳ ವರದಿಯನ್ನು ಕೇಂದ್ರ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

ನಗರದಲ್ಲಿ ಬುಧವಾರ ಜೆಪಿಸಿ ಕಾರ್ಯದರ್ಶಿ ಸ್ವಾತಿ ಪರ್ವಾಲ್ ಹಾಗೂ ಅಧೀನ ಕಾರ್ಯದರ್ಶಿ ದೀಪಿಕಾ ಅವರೊಂದಿಗೆ ಸಭೆ ನಡೆಸಿದ ಯತ್ನಾಳ್ ಬಣದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಭರತ್ ಮಗದೂರ್ ಅವರು "ವಕ್ಫ್ ಭೂ ಕಬಳಿಕೆ ಜನಾಂದೋಲನ ಹೋರಾಟದ" ವರದಿ ಸಲ್ಲಿಸಿದರು.

ಇದಕ್ಕೂ ಮೊದಲು ಮಂಗಳವಾರ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರನ್ನು ಭೇಟಿಯಾಗಿದ್ದ ಯತ್ನಾಳ್ ತಂಡ ಹೋರಾಟದ ಕುರಿತು ವಿವರಿಸಿತ್ತು. ಈ ವೇಳೆ ವಕ್ಫ್‌ಗೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ಕೇಸ್‌ ಟು ಕೇಸ್ ವರದಿ ಸಿದ್ಧಪಡಿಸಿ ಜೆಪಿಸಿ ಅಧಿಕಾರಿಗಳಿಗೆ ಸಲ್ಲಿಸುವಂತೆ ಪಾಲ್ ಅವರು ಸಲಹೆ ನೀಡಿದ್ದರು. ಅಲ್ಲದೆ, ಯತ್ನಾಳ್ ಅವರು ವಿಜಯಪುರದಲ್ಲಿ ನಡೆಸಿದ ವಕ್ಫ್ ವಿರೋಧಿ ಹೋರಾಟಕ್ಕೆ ಆಗಮಿಸಿದ್ದ ಪಾಲ್ ಅವರು ರಾಜ್ಯದಲ್ಲಿ ಪ್ರವಾಸ ಮಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಬಿಜೆಪಿ ತಂಡ ರೈತರು ಹಾಗೂ ಮಠಾಧೀಶರಿಂದ ಮಾಹಿತಿ ಕಲೆ ಹಾಕಿದೆ.

ವಕ್ಫ್ ಕಾರ್ಯ ನಿರ್ಬಂಧಿಸುವಂತೆ ಮನವಿ: ಕುಮಾರ್‌ ಬಂಗಾರಪ್ಪ

ಜೆಪಿಸಿ ಅಧಿಕಾರಿಗಳಿಗೆ ಒಟ್ಟು 2500 ದಾಖಲಾತಿಗಳನ್ನು ಸಲ್ಲಿಸಲಾಗಿದ್ದು, ಕೇಂದ್ರದಲ್ಲಿ ವಕ್ಫ್ ಕಾಯ್ದೆ ಕುರಿತು ಅಂತಿಮ ನಿರ್ಧಾರ ಆಗುವವರೆಗೂ ವಕ್ಫ್‌ ಬೋರ್ಡ್‌ ಕಚೇರಿ ಕಾರ್ಯನಿರ್ವಹಿಸದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸುವಂತೆ ಮನವಿ ಮಾಡಲಾಗಿದೆ ಎಂದು ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ.

ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಅವರ ನೇತೃತ್ವದಲ್ಲಿ ವಕ್ಫ್‌ ಭೂಕಬಳಿಕೆ ವಿರೋಧಿಸಿ ರಾಜ್ಯದ 7 ರಿಂದ 10 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ಮಾಡಲಾಗಿದೆ. 65 ಸಾವಿರ ಆಸ್ತಿಗಳು ದುರುಪಯೋಗ ಆಗಿದ್ದು, ಇವುಗಳ ಆದಾಯ ಸರ್ಕಾರದ ಬದಲು ವಕ್ಫ್‌ ಬೋರ್ಡ್‌ಗೆ ಬರುವಂತೆ ಮಾಡಲಾಗಿದೆ. ಆಂಧ್ರ ಪ್ರದೇಶ ರೀತಿಯಲ್ಲಿ ಕರ್ನಾಟಕದಲ್ಲಿಯೂ ವಕ್ಫ್ ಅನ್ನು ತಾತ್ಕಲಿಕವಾಗಿ ನಿರ್ಬಂಧಿಸಬೇಕು. ಈ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದರು.