ಸಾರಾಂಶ
ಬಿಬಿಎಂಪಿ ಅಧಿಕಾರಿಗಳು ಡಾಂಬರ್ ತುಂಬಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದರು. ಇದೀಗ ಮತ್ತೆ ನಗರದಲ್ಲಿ ಮಳೆ ಆರಂಭಗೊಂಡಿರುವುದರಿಂದ ಮುಚ್ಚಿರುವ ಗುಂಡಿಗಳು ಮತ್ತೆ ಬಾಯ್ದೆರೆಯುತ್ತಿವೆ.
ಬೆಂಗಳೂರು: ನಗರದಲ್ಲಿ ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಇತ್ತೀಚೆಗೆ ಬಿಬಿಎಂಪಿ ಮುಚ್ಚಿದ್ದ ರಸ್ತೆ ಗುಂಡಿಗಳು ಇದೀಗ ಮತ್ತೆ ಬಾಯ್ದೆರೆಯುತ್ತಿವೆ. ಕಳೆದ ಆಗಸ್ಟ್ ಕೊನೆಯ ವಾರದಲ್ಲಿ ನಗರದಲ್ಲಿ ಸುರಿದ ಭಾರೀ ಮಳೆಯಿಂದ ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಡಾಂಬರ್ ತುಂಬಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದರು. ಇದೀಗ ಮತ್ತೆ ನಗರದಲ್ಲಿ ಮಳೆ ಆರಂಭಗೊಂಡಿರುವುದರಿಂದ ಮುಚ್ಚಿರುವ ಗುಂಡಿಗಳು ಮತ್ತೆ ಬಾಯ್ದೆರೆಯುತ್ತಿವೆ.
ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಸಮಸ್ಯೆಯಾಗಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಕೆರೆಯ ನೀರು ಕಟ್ಟಡಗೆ ನುಗ್ಗಿದೆ. ಇದರಿಂದ 4 ಅಡಿ ನೀರು ನಿಂತಿದೆ. ನೀರಿನಲ್ಲಿ 150 ಕಾರು, 600 ಬೈಕ್‌ಗಳು ಮುಳುಗಿವೆ. ಅಪಾರ್ಟ್‌ಮೆಂಟ್‌ನಲ್ಲಿ ಈಗಲೂ 4 ಅಡಿಯಷ್ಟು ನೀರು ನಿಂತಿದ್ದು, ಹೊರಹಾಕಲು ಹರಸಾಹಸ ನಡೆಯುತ್ತಿದೆ. ಟ್ರ್ಯಾಕ್ಟರ್ ಮೂಲಕ ಜನರಿಗೆ ಅವಶ್ಯ ವಸ್ತು ಪೂರೈಸಲಾಗುತ್ತಿದೆ.
ಈ ನಡುವೆ, ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್‌ಮೆಂಟ್‌ನ 7 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದಿದೆ. ಇನ್ನು ಇಟಿಎ ಮಾಲ್ ಬಳಿ ಕಾಂಪೌಂಡ್ ಕುಸಿದೆ. ದಕ್ಷಿಣ ವಲಯ ವಿಜಯನಗರದ ಮನುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್‌ನಲ್ಲಿ ನೀರು ತುಂಬಿ ಹರಿದಿದ್ದು, ಸುಮಾರು 10 ಮನೆಗಳಿಗೆ ನುಗ್ಗಿದೆ. ಮಲ್ಲೇಶ್ವರ 17ನೇ ಕ್ರಾಸ್ ಸೇರಿದಂತೆ ವಿವಿಧ ಕಡೆ 20 ಮರಗಳು ಹಾಗೂ 50 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ.