ಕೆಎಎಸ್‌ ಮರುಪರೀಕ್ಷೆಗೆ ಆದೇಶಿಸಲು ಸಿಎಂಗೆ ಯಾವ ಅಧಿಕಾರವಿದೆ? - ಅಧಿಕಾರ ಕೊಟ್ಟ ನಿಯಮ ಯಾವುವು? : ಕೋರ್ಟ್‌

| Published : Dec 10 2024, 09:55 AM IST

Highcourt
ಕೆಎಎಸ್‌ ಮರುಪರೀಕ್ಷೆಗೆ ಆದೇಶಿಸಲು ಸಿಎಂಗೆ ಯಾವ ಅಧಿಕಾರವಿದೆ? - ಅಧಿಕಾರ ಕೊಟ್ಟ ನಿಯಮ ಯಾವುವು? : ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹೊಸದಾಗಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆದೇಶ ಹೊರಡಿರುವುದನ್ನು ಆಕ್ಷೇಪಿಸಿರುವ ಹೈಕೋರ್ಟ್‌

ಧಾರವಾಡ : ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹೊಸದಾಗಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆದೇಶ ಹೊರಡಿರುವುದನ್ನು ಆಕ್ಷೇಪಿಸಿರುವ ಹೈಕೋರ್ಟ್‌, ಮರು ಪರೀಕ್ಷೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ಯಾವ ನಿಯಮಗಳು ಕಲ್ಪಿಸಿವೆ ಎಂದು ಖಾರವಾಗಿ ಪ್ರಶ್ನಿಸಿದೆ.

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಹೊಸದಾಗಿ ಮಾಡಲು ಕೆಪಿಎಸ್‌ಸಿ ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಬೆಳಗಾವಿಯ ಸ್ಪೂರ್ತಿ ಬೈರಪ್ಪನವರ್‌ ಸೇರಿದಂತೆ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠ ಈ ಪ್ರಶ್ನೆ ಮಾಡಿದೆ.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮರು ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಆದೇಶ ಹೊರಡಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮರು ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವ ಅಧಿಕಾರವಿದೆ? ಇಂತಹ ಅಧಿಕಾರವನ್ನು ಮುಖ್ಯಮಂತ್ರಿಗೆ ದಯಪಾಲಿಸಿರುವ ನಿಯಮಗಳು ಯಾವುವು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕೆಪಿಎಸ್‌ಸಿ ಪರ ವಕೀಲರು, ಮರು ಪರೀಕ್ಷೆನಡೆಸಲು ಮುಖ್ಯಮಂತ್ರಿಗಳು ಆದೇಶ ಮಾಡಿಲ್ಲ. ಮರು ಪರೀಕ್ಷೆಯ ನಡೆಸುವ ನಿರ್ಧಾರ ಆಯೋಗದ್ದಾಗಿದೆ. ಪ್ರಶ್ನೆ ಪತ್ರಿಕೆಗಳಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಿಯಾಗಿ ಭಾಷಾಂತರ ಆಗಿಲ್ಲ ಎಂದು ಪರೀಕ್ಷೆ ಬರೆದ 70 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ ಆಕ್ಷೇಪಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಸದಸ್ಯರು ಸಭೆ ನಡೆಸಿ ಚರ್ಚಿಸಿ ತೀರ್ಮಾನಿಸಿದ್ದಾರೆ. ಅದರಂತೆ ಡಿ.29ರಂದು ಮರು ಪರೀಕ್ಷೆ ನಡೆಸುವುದಕ್ಕೆ ಆರ್ಥಿಕ ಅನುಮೋದನೆ ನೀಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಆಗ ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ ಅರ್ಜಿದಾರರು ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ಕೆಪಿಎಸ್‌ಸಿ ಪ್ರಮುಖವಾಗಿ ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಅದರಂತೆ ಮರು ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳುಲು ಮುಖ್ಯಮಂತ್ರಿಗಳು ಹೊಂದಿರುವ ಅಧಿಕಾರವೇನು? ಯಾವ ನಿಯಮಗಳಡಿ ಮರು ಪರೀಕ್ಷೆ ನಡೆಸಲು ಅವಕಾಶವಿದೆ? ಪರೀಕ್ಷೆ ನಡೆಸುವುದಕ್ಕೆ ಇರುವ ಮಾನದಂಡಗಳೇನು? ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಕೆಪಿಎಸ್‌ಸಿ ಉತ್ತರ ನೀಡಬೇಕು ಎಂದು ಸೂಚಿಸಿ ಅರ್ಜಿಗಳ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿದರು.

ಅಲ್ಲದೆ, ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿಯು 2024ರ ಅ.30ರಂದು ಹೊರಡಿಸಿರುವ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಇದೇ ವೇಳೆ ನ್ಯಾಯಪೀಠ ವಿಸ್ತರಿಸಿದೆ.