ಸಾರಾಂಶ
ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ
ಬೆಂಗಳೂರು: ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, 150 ಕೋಟಿ ರು. ವೆಚ್ಚದಲ್ಲಿ ಮಾಡಿದ ರಾಜ್ಯದ ಜಾತಿ ಗಣತಿ ವರದಿ ಏನಾಗಲಿದೆ ಎಂಬುದು ಜನತೆಯ ಪ್ರಶ್ನೆ. ಸಮೀಕ್ಷೆಯ ಗತಿ ಏನೆಂಬುದನ್ನು ಸಿಎಂ ಸಿದ್ದರಾಮಯ್ಯ ತಿಳಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಬ್ರಿಟಿಷರ ನಂತರ ಜವಹಾರ್‌ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಧಾನಿಯಾದರೂ ಕಾಂಗ್ರೆಸ್ ಜಾತಿ ಸಮೀಕ್ಷೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಅಂತಹ ಸಾಮಾನ್ಯ ಜ್ಞಾನ ಕೂಡ ಇಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು ಎಂದು ಕಿಡಿಕಾರಿದರು.
2029 ಕ್ಕೆ ಮಹಿಳಾ ಮೀಸಲಾತಿ ತರಲಾಗುವುದು ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಜನಗಣತಿ ಹಾಗೂ ಜಾತಿ ಸಮೀಕ್ಷೆ ನೆರವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಾಕಾರಣ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. 2015ರಲ್ಲಿ ಜಾತಿ ಗಣತಿ ಮಾಡಿ 10 ವರ್ಷಗಳ ನಂತರ ಅದನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್ ಮೊದಲು ಯೋಚಿಸಬೇಕು. ದೇಶದಲ್ಲಿ ಜಾತಿ ಗಣತಿ ಮಾಡಲಾಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಬೇಕು ಎಂದು ಹೇಳಿದರು.