ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆ ಬಗ್ಗೆ ಮಹಿಳಾ ಅಧಿಕಾರಿಯ ಟೀಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರದ ಬೆನ್ನಲ್ಲೇ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇಲ್ಲಿನ ಉಪ ನೋಂದಣಾಧಿಕಾರಿ ರಾಧಮ್ಮ ಅವರನ್ನು ಎತ್ತಗಂಡಿ ಮಾಡಿ ಜಿಲ್ಲಾ ಕೇಂದ್ರದ ಕಚೇರಿಗೆ ನಿಯೋಜಿಸಿದ್ದಾರೆ
ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆ ಬಗ್ಗೆ ಮಹಿಳಾ ಅಧಿಕಾರಿಯ ಟೀಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರದ ಬೆನ್ನಲ್ಲೇ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇಲ್ಲಿನ ಉಪ ನೋಂದಣಾಧಿಕಾರಿ ರಾಧಮ್ಮ ಅವರನ್ನು ಎತ್ತಗಂಡಿ ಮಾಡಿ ಜಿಲ್ಲಾ ಕೇಂದ್ರದ ಕಚೇರಿಗೆ ನಿಯೋಜಿಸಿದ್ದಾರೆ.
ಜಮೀನು ಹಾಗೂ ನಿವೇಶನದ ಖಾತೆ ನೋಂದಣಿಗೆ ಸಂಬಂಧಪಟ್ಟಂತೆ ಇಲ್ಲಿನ ಉಪ ನೋಂದಣಾಧಿಕಾರಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇಲಾಖೆಯ ಪ್ರತಿಯೊಂದು ಕೆಲಸಕ್ಕೆ ಇಂತಿಷ್ಟು ಲಂಚ ನೀಡುವ ಅನಿರ್ವಾಯತೆ ಸೃಷ್ಟಿಸಿದ್ದಾರೆ. ದಲ್ಲಾಳಿಗಳ ಹಾವಳಿಯಿಂದ ರೈತರು ಹಾಗೂ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಹಿಂದಷ್ಟೇ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು.
ಈ ವಿವಾದ ತಣ್ಣಗಾಗುವ ಮೊದಲೇ ಅಧಿಕಾರಿ ರಾಧಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಕುರಿತು ಟೀಕೆ ಮಾಡಿ ಅವಹೇಳನವಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ರಾಧಮ್ಮ ಅವರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ಪಾವಗಡ ಉಪ ನೋಂದಣಾಧಿಕಾರಿ ರಾಧಮ್ಮ ಮಾತನಾಡಿದ ವಿಡಿಯೋದಲ್ಲಿ, ಕಾಂಗ್ರೆಸ್ ಏನ್ ದಬ್ಬಾಕಿರೋದು? ಗಾಂಧಿಜೀ ಹೆಂಡತಿ ಮುಸ್ಲಿಂ, ಇಂದಿರಾಗಾಂಧಿ ಗಂಡ ಮುಸ್ಲಿಂ, ಸಂಪೂರ್ಣ ಅಧಿಕಾರ ಕಾಂಗ್ರೆಸ್‌ಗೆ ಕೊಟ್ಟಿದ್ರೆ ಇಷ್ಟೋತ್ತಿಗೆ ದೇಶವನ್ನು ಧೂಳಿಪಟ ಮಾಡಿ ನಮಗೆ ಕುಡಿಯೋಕೆ ನೀರು ಸಿಗ್ತಿರಲಿಲ್ಲ.
ಸಿದ್ದರಾಮಯ್ಯ ಎಲ್ಲವನ್ನು ಫ್ರೀಯಾಗಿ ಹೆಣ್ಣು ಮಕ್ಕಳಿಗೆ ಕೊಟ್ಟ, ಎಲ್ಲಾ ದರ ಜಾಸ್ತಿ ಮಾಡಿ ಬರೆ ಎಳೆದು ಕುರಿಸಿದ್ರು. ತರಕಾರಿ, ಹಣ್ಣು, ಹಾಲು, ಮಕ್ಕಳು ತಿನ್ನುವ ಬಿಸ್ಕೆಟ್, ಬೆಳೆ ಕಾಳು ಎಲ್ಲ ಒನ್ ಟು ಡಬಲ್ ಆಗಿದೆ. ಸಿದ್ದರಾಮಯ್ಯ ಆರ್ಟಿಕಲ್ ಹೇಳದೇ ಇರೋದು ಒಂದೇ 150 ಆರ್ಟಿಕಲ್ ಹೇಳೋದು ಒಂದೇಯಾ. ಹೆಂಗಸರು ಮನೆಲಿ ಇರದೇ ಬೀದಿ ಸುತ್ತುವ ಹಾಗೇ ಮಾಡಿದ್ದೆ ಸಿದ್ದರಾಮಯ್ಯ ಎಂದು ಮಾತನಾಡಿ ಅವಹೇಳನ ಮಾಡಿದ್ದಾರೆ. ಜಿಲ್ಲಾಧಿಕಾರಿ ಈ ಕ್ರಮಕ್ಕೆ ರೈತ ಸಂಘಟನೆ ಹಾಗೂ ಸಾರ್ವಜನಿಕರು ಡೀಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.