ಸಾರಾಂಶ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಂಭಾಗ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಹಮ್ಮಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ಕುಂದಾಪುರ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಸಿದ್ಧಿಯಿಂದ ಬಿಜೆಪಿ ಕಂಗೆಟ್ಟು ಅಪಪ್ರಚಾರಗೈಯುತ್ತಿದೆ. ಇದು ಫಲಿಸದು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಎಂ. ಎ. ಗಫೂರ್ ಹೇಳಿದ್ದಾರೆ.ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಂಭಾಗ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಸತ್ಯದರ್ಶನ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬಗ್ಗೆ ಕಾಳಜಿ ವಹಿಸದೆ ಶ್ರೀಮಂತರ ಪರ ಕಾರ್ಯನಿರ್ವಹಿಸುತ್ತಿದೆ. ಭಾರತ ದೇಶದಲ್ಲಿ ಬಡವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಉಲ್ಲೇಖಿಸಿದ್ದಾರೆ. ಅವರದ್ದೇ ಪಕ್ಷದ ಮುಖಂಡ ಹೇಳಿದ ಮೇಲೆ ಇನ್ನೆನಿದೆ ಎಂದರು.ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಡವರ ಬಗ್ಗೆ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಜನಮನದಲ್ಲಿ ಸಿದ್ದರಾಮಯ್ಯ ಆಡಳಿತ ಪ್ರಸಿದ್ಧಿ ಪಡೆದಿದೆ. ಕೇಂದ್ರದ ಬಿಜೆಪಿ ಬಡವರ ಬದುಕಿಗೆ ಕೊಡಲಿ ಇಟ್ಟು ಆಡಳಿತ ನಡೆಸುತ್ತಿದೆ, ಬಿಜೆಪಿ ಗ್ರಾಮಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೆಡಿನ ವಿಚಾರ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಜಿ.ತಿಮ್ಮ ಪೂಜಾರಿ ಹಾಗೂ ಯುವ ಮುಖಂಡ ನೆಲ್ಲಿಬೆಟ್ಟು ಗಣೇಶ್ ಸ್ಥಳೀಯ ಬಿಜೆಪಿ ನಾಯಕರ ಹಾಗೂ ಗ್ರಾಮಪಂಚಾಯಿತಿ ಆಡಳಿತದ ಕಾರ್ಯವೈಖರಿಯ ವಿರುದ್ಧ ಆಕ್ರೋಶ ಹೊರಹಾಕಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕಾರ್ಯದರ್ಶಿ ಗೋಪಾಲ ಬಂಗೇರ, ಮುಖಂಡರಾದ ರವೀಂದ್ರ ಕಾಮತ್, ಅಚ್ಯುತ್ ಪೂಜಾರಿ, ಬಸವ ಪೂಜಾರಿ, ದಿನೇಶ್ ಬಂಗೇರ, ಪ್ರೇಮ ಮೆಂಡನ್, ವಸಂತಿ ಪೂಜಾರಿ, ಶೇಖರ್ ಮರಕಾಲ, ಮಹಾಬಲ ಮಡಿವಾಳ ಮತ್ತಿತರರು ಇದ್ದರು. ಪಟ್ಟಣ ಪಂಚಾಯಿತಿ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.