ಸಾರಾಂಶ
ಆಹಾರ ಬೆಳೆಯುವುದರ ಜೊತೆಗೇ ರೈತರನ್ನೇ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿ, ಉದ್ಯಮಿಗಳಾಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಂಟಿಯಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರು : ಆಹಾರ ಬೆಳೆಯುವುದರ ಜೊತೆಗೇ ರೈತರನ್ನೇ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿ, ಉದ್ಯಮಿಗಳಾಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಂಟಿಯಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಈ ವರ್ಷ ಆಹಾರ ಸಂಸ್ಕರಣೆ ಮತ್ತು ರಫ್ತು ಹೆಚ್ಚಿಸಲು 206 ಕೋಟಿ ರೂಪಾಯಿಗಳನ್ನು ಸದ್ಬಳಕೆ ಮಾಡಲು ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (KAPPEC)ಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಗುರಿ ಹಾಕಿಕೊಟ್ಟಿದ್ದಾರೆ. ಈ ಯೋಜನೆ ಮೂಲಕ ಪ್ರತಿ ಆಹಾರ ಸಂಸ್ಕರಣ ಉದ್ಯಮಿಯೂ 15 ಲಕ್ಷ ರೂವರೆಗೂ ಸಬ್ಸಿಡಿ ಪಡೆಯಬಹುದು. 15 ಲಕ್ಷ ರೂಪಾಯಿಯಲ್ಲಿ 9 ಲಕ್ಷ ರೂಪಾಯಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು 5 ಲಕ್ಷ ರೂಪಾಯಿ ನೀಡಲಿದೆ. ಈ ವರ್ಷ ಕನಿಷ್ಠ 5 ಸಾವಿರ ಹೊಸ ಆಹಾರ ಉದ್ಯಮಿಗಳ ಸೃಷ್ಟಿಯಾಗಿ, 206 ಕೋಟಿ ರೂಪಾಯಿಗೂ ಹೆಚ್ಚು ಬೇಡಿಕೆ ಬಂದಲ್ಲಿ ಸರ್ಕಾರ ನೀಡಲು ಸಿದ್ಧವಿದೆ ಎಂದು ಕೆಪೆಕ್ ಅಧಿಕಾರಿಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಮಗದ ಅಧ್ಯಕ್ಷ ಬಿ.ಎಚ್. ಹರೀಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಯೋಜನೆ ಜಾರಿಗೆ ಸಿದ್ಧತೆ ತುರುಸಿನಿಂದ ನಡೆದಿದೆ. ಈ ಯೋಜನೆಯನ್ನು ರೈತರಿಗೆ ಮತ್ತು ಆಸಕ್ತ ಉದ್ಯಮಿಗಳಿಗೆ ತಲುಪಿಸಲು 400 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ರಾಜ್ಯಾದ್ಯಂತ ನೇಮಕ ಮಾಡಿ, ಅವರಿಗೆ ತರಬೇತಿಯನ್ನೂ ಆರಂಭಿಸಲಾಗುತ್ತಿದೆ.
2020-2021ರಿಂದಲೇ ಈ ಯೋಜನೆ ಚಾಲ್ತಿಯಲ್ಲಿದ್ದು ಈವರೆಗೆ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಆಹಾರ ಉದ್ಯಮಿಗಳನ್ನು ಸೃಷ್ಟಿಸಿದೆ. ಈಗಾಗಲೇ ಬೇಕರಿ ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳ ಆಹಾರ ಸಂಸ್ಕರಣಾ ಉದ್ಯಮಗಳು ಕೆಪೆಕ್ ಮೂಲಕ ಸಬ್ಸಿಡಿ ಪಡೆದುಕೊಂಡಿವೆ. ಇದರಲ್ಲಿ 6 ಉದ್ಯಮಿಗಳು ವಿವಿಧ ದೇಶಗಳಿಗೆ ರಫ್ತು ಕೂಡ ಮಾಡುತ್ತಿದ್ದಾರೆ.
ಯಾರು ಯಾರು ಪಡೆಯಬಹುದು?
ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಶುರು ಮಾಡುವವರಿಗೆ ಅಥವಾ ಚಾಲ್ತಿಯಲ್ಲಿರುವ ಉದ್ದಿಮೆ ವಿಸ್ತರಿಸುವವರು ಈ ಸಬ್ಸಿಡಿ ಪಡೆಯಬಹುದು. 18 ವರ್ಷ ಮೇಲ್ಪಟ್ಟು ಯಾವುದೇ ವಿದ್ಯಾರ್ಹತೆ ಇಲ್ಲದವರು ಇದರ ಲಾಭ ಪಡೆಯಬಹುದು. ಯೋಜನೆಯ ಲಾಭವನ್ನು ಬ್ಯಾಂಕ್ ಸಾಲ ಮುಖೇನವಾಗಿಯೇ ಪಡೆಯಬೇಕು. ಯೋಜನೆಯ ಒಟ್ಟು ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಠ 15 ಲಕ್ಷ ರೂಪಾಯಿವರೆಗೂ ಸಬ್ಸಿಡಿ ದೊರೆಯಲಿದೆ.
ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಸಂಘಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗೆ 4 ಲಕ್ಷ ರೂಪಾಯಿ ಕಡಿಮೆ ಬಡ್ಡಿದರದ ಸಾಲ ದೊರೆಯಲಿದೆ.
ರೈತ ಉತ್ಪಾದಕ ಸಂಸ್ಥೆಗಳು, ಕಂಪನಿಗಳು, ಸಹಕಾರಿ, ಸ್ವಸಹಾಯ ಸಂಘಗಳು ಆಹಾರ ಸಂಸ್ಕರಣೆ, ವಿಂಗಡಣೆ, ಪ್ಯಾಕೇಜಿಂಗ್ ಉದ್ಯಮ ಆರಂಭಿಸುವುದಾದರೆ 3 ಕೋಟಿ ರೂಪಾಯಿವರೆಗೂ ಸಬ್ಸಿಡಿ ದೊರೆಯಲಿದೆ. ಬ್ಯಾಂಕ್ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ ಇದಾಗಿದೆ ಎಂದು ಕೆಪೆಕ್ ಎಂಡಿ ಶಿವಪ್ರಕಾಶ್ ಅವರು ಕನ್ನಡಪ್ರಭಕ್ಕೆ ವಿವರಿಸಿದ್ದಾರೆ.
ಸಬ್ಸಿಡಿ ಪಡೆಯೋದು ಹೇಗೆ..?
ಪ್ರತಿ ಜಿಲ್ಲೆಯಲ್ಲೂ ಇರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ನೆರವಾಗಲಿದ್ದಾರೆ. ಈ ಯೋಜನೆಗಾಗಿಯೇ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ - 080 22243082 ಸಂಖ್ಯೆಗಳಿಗೆ ಕೆಲಸದ ದಿನಗಳಲ್ಲಿ ಬೆಳಗ್ಗೆ 10:30 ರಿಂದ ಸಂಜೆ 4ರ ಒಳಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಇಮೇಲ್ - pmfmekarnataka@gmail.com ಗೆ ಮೇಲ್ ಕಳಿಸಿಯೂ ಮಾಹಿತಿ ಪಡೆಯಬಹುದು.
ರೈತರನ್ನೇ ಆಹಾರ ಉದ್ಯಮಿಯಾಗಿಸಲು ಇರುವ ಅವಕಾಶ ಇದು. ರೈತರಲ್ಲದ ಯುವಕರೂ ಇದರ ಲಾಭ ಪಡೆಯಬಹುದು. ಸಂಸ್ಕರಿತ ಆಹಾರ ಮಾರುಕಟ್ಟೆಯಲ್ಲಿರುವ ಅವಕಾಶ ಬಳಸಿಕೊಳ್ಳಲು ನಾವು ನೆರವಾಗುತ್ತೇವೆ. ಪ್ರತಿ ವರ್ಷ 200 ಕೋಟಿ ರೂಪಾಯಿಯಲ್ಲಿ 50 ರಿಂದ 60 ಕೋಟಿ ಮಾತ್ರ ಈ ಹಣ ಬಳಕೆಯಾಗುತ್ತಿದೆ. ಈ ಬಾರಿ ಗುರಿ ಮೀರಿದ ಸಾಧನೆ ಮಾಡುವ ಸಂಕಲ್ಪ ಮಾಡಿದ್ದೇವೆ. ಅಗತ್ಯ ಬಿದ್ದಲ್ಲಿ ಇನ್ನು ಹೆಚ್ಚು ಹಣ ನೀಡಲು ಸರ್ಕಾರ ಸಿದ್ಧವಿದೆ. ಮಿಲ್ಲೆಟ್ ಮೇಳದಲ್ಲಿ ಸಂಸ್ಕರಿತ ಆಹಾರಕ್ಕೆ ಇ ಮಾರುಕಟ್ಟೆ ಸೇರಿದಂತೆ ಎಲ್ಲಾ ಬಗೆಯ ಮಾರುಕಟ್ಟೆ ಕಲ್ಪಿಸಲು 183 ಕೋಟಿ ಹೂಡಿಕೆ ಮಾಡಲು ವಿವಿಧ ಕಂಪನಿಗಳು ಮುಂದೆ ಬಂದಿವೆ.
- ಎನ್ ಚಲುವರಾಯಸ್ವಾಮಿ, ಕೃಷಿ ಸಚಿವರು
ಕರ್ನಾಟಕದ ಸಂಸ್ಕರಿತ ಆಹಾರಕ್ಕೆ ದೇಶಾದ್ಯಂತ ಮಾರುಕಟ್ಟೆ ಇದೆ. ಸರಿಯಾದ ಪ್ಯಾಕೇಂಜಿಂಗ್ ಮತ್ತು ಬ್ರ್ಯಾಂಡಿಂಗ್ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು ಕೆಪೆಕ್ ನ ಉದ್ದೇಶಗಳಲ್ಲಿ ಒಂದು. ನಮ್ಮ ಆಹಾರ ಉದ್ಯಮಿಗಳಿಗೆ ಸಬ್ಸಿಡಿ ನೀಡುವ ಜೊತೆಗೆ ರಫ್ತು ಕುರಿತು ತರಬೇತಿ, ಸಹಾಯ ಹೆಚ್ಚಿಸಲಿದ್ದೇವೆ. ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು.
- ಬಿ.ಎಚ್ ಹರೀಶ್, ಅಧ್ಯಕ್ಷರು, ಕೆಪೆಕ್
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))