ಸಾರಾಂಶ
ಬೆಂಗಳೂರು : ಕಳೆದೆರಡು ದಿನಗಳ ಕಾಲ ಬಿಡುವು ನೀಡಿದ್ದ ಮುಂಗಾರು ಮಳೆ, ಸೋಮವಾರ ರಾತ್ರಿ ವೇಳೆಗೆ ಭಾರೀ ಮಳೆ ಸುರಿದಿದೆ. ಅದರಲ್ಲೂ ಯಲಹಂಕ, ಪೂರ್ವ ವಲಯ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.
ನಗರದಲ್ಲಿ ಕೆಲದಿನಗಳಿಂದ ಕಡಿಮೆಯಾಗಿದ್ದ ಮಳೆಯ ಪ್ರಮಾಣ ಸೋಮವಾರದಿಂದ ಮತ್ತೆ ಜೋರಾಗಿದೆ. ಸೋಮವಾರ ಸಂಜೆ 5 ಗಂಟೆ ವೇಳೆಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ, ರಾತ್ರಿ 7 ಗಂಟೆ ನಂತರ ಸತತ 2 ಗಂಟೆಗೂ ಹೆಚ್ಚಿನ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆಯ ಮಾದರಿಯಲ್ಲಿಯೇ ಗಾಳಿ ಪ್ರಮಾಣ ಕಡಿಮೆಯಿದ್ದ ಕಾರಣದಿಂದ ನಗರದಲ್ಲಿ ಎಲ್ಲೂ ಮರಗಳು ಬಿದ್ದಿಲ್ಲ. ಆದರೆ, ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದ ಕಾರಣ ಪ್ರಮುಖ ರಸ್ತೆಗಳಲ್ಲಿ, ಮೇಲ್ಸೇತುವೆ, ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗುವಂತಾಗಿತ್ತು. ಅಲ್ಲದೆ, ಮಳೆಯ ಪ್ರಮಾಣ ಹೆಚ್ಚಾಗಿದ್ದ ಕಾರಣ, ತಗ್ಗು ಪ್ರದೇಶದ ವಸತಿ ಬಡಾವಣೆಗಳ ಜನರು ರಾತ್ರಿಯಿಡೀ ಭಯದಲ್ಲಿಯೇ ಇರುವಂತಾಗಿತ್ತು.
ವಿಜಯನಗರ, ಮಲ್ಲೇಶ್ವರ, ಗಾಂಧಿನಗರ, ಮೆಜೆಸ್ಟಿಕ್, ಶಾಂತಿನಗರ, ಕೆಂಗೇರಿ, ಯಲಹಂಕ, ಕತ್ತರಿಗುಪ್ಪೆ, ಕನಕಪುರ ರಸ್ತೆ, ಮಹದೇವಪುರ, ಕೆಆರ್ ಪುರ, ಮಾರತಹಳ್ಳಿ, ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದೆಲ್ಲೆಡೆ ಮಳೆಯಾಗಿದೆ. ಮಳೆ ನೀರು ಸರಿಯಾಗಿ ಚರಂಡಿಗಳಲ್ಲಿ ಹರಿಯದ ಕಾರಣ ಅಂಬೇಡ್ಕರ್ ಬೀದಿ, ಶಾಂತಿನಗರ ಡಬ್ಬಲ್ ರಸ್ತೆ, ಮೈಸೂರು ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಹಲಸೂರು ರಸ್ತೆ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು. ಅಲ್ಲದೆ, ಮೈಸೂರು ರಸ್ತೆ ಮೇಲ್ಸೇತುವೆ, ಓಕಳಿಪುರ ಕೆಳಸೇತುವೆ, ಶಿವಾನಂದ ವೃತ್ತ ರೈಲ್ವೆ ಕೆಳಸೇತುವೆ, ಕಾವೇರಿ ಜಂಕ್ಷನ್ ಕೆಳ ಸೇತುವೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನೀರು ಶೇಖರಣೆಗೊಂಡು ಈ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಗಿತ್ತು. ಅಲ್ಲದೆ, ಕೆಲವೆಡೆ ವಾಹನಗಳು ರಸ್ತೆಯಲ್ಲಿ ಶೇಖರಣೆಯಾಗಿದ್ದ ನೀರಿನಲ್ಲಿ ಮುಳುಗುವಂತಾಗಿತ್ತು.ಇನ್ನೂ ಮೂರ್ನಾಲ್ಕುದಿನ ಭಾರೀ ಮಳೆ
ಮಂಗಾರು ಮಳೆಯ ಜತೆಗೆ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೊಸ್ಕೂರಲ್ಲಿ 52 ಮಿ.ಮೀ. ಮಳೆ
ಹೊಸ್ಕೂರು 52 ಮಿ.ಮೀ., ಬೆಂಗಳೂರು ಉತ್ತರ 50, ಸೊನ್ನೆನಹಳ್ಳಿ, ನಾಯಂಡಹಳ್ಳಿ ತಲಾ 48, ಕೆಂಗೇರಿ ದಕ್ಷಿಣ 42, ವಿಶ್ವನಾಥ ನಾಗೇನಹಳ್ಳಿ 41, ವಡೇರಹಳ್ಳಿ 38, ಬೆಂಗಳೂರು ವಿವಿ ಕ್ಯಾಂಪಸ್ 30, ಹುರಳಿ ಚಿಕ್ಕನಹಳ್ಳಿ 28, ಸಿಂಗನಾಯಕನಹಳ್ಳಿ 25, ಸೋಮಶೆಟ್ಟಿಹಳ್ಳಿ 25, ಶಿವಕೋಟೆ 20, ಚಾಮರಾಜಪೇಟೆ 19, ಹಂಪಿನಗರ 16 ಮಿ.ಮೀ. ಮಳೆಯಾಗಿದೆ.