ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹವಾಮಾನ ಇಲಾಖೆಯಿಂದ ಅರೇಂಜ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಶಾಲೆಗಳು ಆರಂಭವಾಗುವ ಕೆಲ ನಿಮಿಷಗಳ ಮೊದಲು ನಗರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದರೆ, ಇನ್ನು ಅನೇಕ ಶಾಲೆಗಳು ರಜೆ ನೀಡಲಿಲ್ಲ. ಕೆಲವು ಶಾಲೆಗಳು ಆನ್‌ಲೈನ್ ತರಗತಿಯನ್ನು ನಡೆಸಿದವು.ಬೆಳಗ್ಗೆ ಮೂರು ತಾಸುಗಳ ಅವಧಿಗೆ ಅರೇಂಜ್ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ಮೌಖಿಕ ಆದೇಶದ ಮೂಲಕ ಎಲ್ಲ ಅಂಗನವಾಡಿಗಳು, ಶಾಲೆಗಳಿಗೆ ರಜೆ ಘೋಷಿಸಿದರು. ಆದರೆ, ಕೆಲವು ಶಾಲೆಗಳು ಮಾತ್ರ ಅದನ್ನು ವಿದ್ಯಾರ್ಥಿಗಳ ಪಾಲಕರಿಗೆ ತಿಳಿಸಿ ರಜೆ ನೀಡಿದರು. ಕೆಲವು ಶಾಲೆಗಳಿಗೆ ಮಕ್ಕಳು ಬಂದಿದ್ದರಿಂದ ತರಗತಿಗಳು ಎಂದಿನಂತೆ ನಡೆದವು. ರಜೆ ಘೋಷಿಸಿದ ವಿಷಯ ತಿಳಿದ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲಿಲ್ಲ. ಕೆಲವು ಶಾಲೆಗಳು ಎಂದಿನಂತೆ ತರಗತಿ ಮುಂದುವರೆಸಿದವು.
ಆನ್‌ಲೈನ್ ತರಗತಿ:ಕಳೆದ ಕೆಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಲ್ಲಾಡಳಿತ ಒಂದು ವಾರದ ಅಂತರದಲ್ಲಿ ಎರಡನೇ ಬಾರಿ ರಜೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲೆಗಳು ನಿಗದಿಯಂತೆ ಸಿಲಬಸ್ ಮುಂದುವರೆಸುವ ಉದ್ದೇಶದಿಂದ ಆನ್‌ಲೈನ್ ತರಗತಿಗಳನ್ನು ನಡೆಸಿದವು.ಇನ್ನು ಕೆಲವು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಶಾಲೆಗಳು ಆನ್‌ಲೈನ್ ತರಗತಿ ನಡೆಸಲು ಸಿದ್ಧತೆ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.