ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗದರಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಣ್ಣನವರ ಹೆಸರು ಈಗಾಗಲೇ ಘೋಷಣೆಯಾಗಿದೆ. ಇನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತವೆಯೋ ಅಥವಾ ಪ್ರತ್ಯೇಕವಾಗಿ ಹುರಿಯಾಳುಗಳನ್ನು ಅಖಾಡಕ್ಕಿಳಿಸುತ್ತಿವೆಯೋ ಎಂಬುದು ಕುತೂಹಲ ಮೂಡಿಸಿದೆ.ಬಿಜೆಪಿ - ಜೆಡಿಎಸ್ ಮೈತ್ರಿ ಮಾತುಕತೆ
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ರಾಜಕೀಯ ಮೈತ್ರಿ ಮಾತುಕತೆ ನಡೆದು ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟವನ್ನು ಅಧಿಕೃತವಾಗಿ ಸೇರಿಕೊಂಡಿದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯನ್ನು ಸಹ ಬಿಜೆಪಿ - ಜೆಡಿಎಸ್ ಒಟ್ಟಾಗಿ ಎದುರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯೂ ಘೋಷಣೆಯಾಗಬೇಕಾಗಿದೆ. ಈ ಕ್ಷೇತ್ರಕ್ಕೆ ಹಿರಿಯ ಮುಖಂಡ ಡಾ. ರಾಮೋಜಿಗೌಡ ಹೆಸರು ಕಾಂಗ್ರೆಸ್ ಪಕ್ಷದಲ್ಲಿ ಅಂತಿಮಗೊಂಡಿದ್ದು, ಜೆಡಿಎಸ್ - ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿ ಯಾರೆಂಬುದು ಫೈನಲ್ ಆಗಿಲ್ಲ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಒಂದೊಂದು ಕ್ಷೇತ್ರ ಹಂಚಿಕೊಂಡು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳೇ ಹೆಚ್ಚಾಗಿದೆ.
ವಿಧಾನ ಪರಿಷತ್ ಸ್ಥಾನಗಳ ಹಂಚಿಕೆ ಕುರಿತು ಉಭಯ ಪಕ್ಷಗಳಲ್ಲಿ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿಲ್ಲ ಎಂದು ಮೂಲಗಳು ತಿಳಿಸಿವೆ.ಜೆಡಿಎಸ್ ಅಭ್ಯರ್ಥಿ ಕಣಕ್ಕೆ ?
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣನ ರಾಜೀನಾಮೆಯಿಂದ ಮಾ.16ಕ್ಕೆ ತೆರವಾದ ಸ್ಥಾನದ ಅವಧಿ 2026ರ ನವೆಂಬರ್ 11ರವರೆಗೆ ಇದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಪುಟ್ಟಣ್ಣಗೆ ಪರಿಷತ್ ಚುನಾವಣೆ ಟಿಕೆಟ್ ಘೋಷಿಸಿ ಗ್ರೀನ್ ಸಿಗ್ನಿಲ್ ಕೊಟ್ಟಿದೆ. ಜೆಡಿಎಸ್ ನಿಂದ ವಕೀಲ ಎ.ಪಿ.ರಂಗನಾಥ್ , ಬಿಜೆಪಿಯಿಂದ ಡಾ.ಅಪ್ಪಾಜಿ ಗೌಡರವರ ಹೆಸರು ಚಾಲ್ತಿಯಲ್ಲಿದೆ. ಈ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಜೆಡಿಎಸ್ ಗೆ ಬಿಟ್ಟು ಕೊಟ್ಟು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ.ಈ ಮೊದಲು ಬೆಂಗಳೂರು ಪದವೀಧರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವ ಆಲೋಚನೆ ಮಾಡಿತ್ತು. ಆದರೆ, ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಆಕಾಂಕ್ಷಿತ ಅಭ್ಯರ್ಥಿ ಎ.ಪಿ.ರಂಗನಾಥ್ ನಾಲ್ಕೈದು ತಿಂಗಳಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಶಿಕ್ಷಕರ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದೆ.
ಕೈಗೆ ಕಠಿಣ ಸವಾಲುಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಾಬಲ್ಯ ಸಮಾನವಾಗಿದ್ದು, ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ಮೂರು ಪಕ್ಷಗಳು ಆಲೋಚನೆಯಲ್ಲಿದ್ದವು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆಬಂದ ಮೇಲೆ ಕಾಂಗ್ರೆಸ್ ಪಕ್ಷ ಪ್ರಬಲಗೊಂಡಿದೆ. ಹೀಗಾಗಿ ಜೆಡಿಎಸ್ - ಬಿಜೆಪಿ ಪಕ್ಷಗಳು ಮೈತ್ರಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿ ಕಾಂಗ್ರೆಸ್ ಗೆ ಟಕ್ಕರ್ ನೀಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪಷ್ಟ ಸಂದೇಶ ರವಾನಿಸುವ ಉಮೇದಿನಲ್ಲಿವೆ. ಹಾಗೊಂದು ವೇಳೆ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ.
ಬಿಜೆಪಿ - ಜೆಡಿಎಸ್ ನಲ್ಲಿ ಸ್ಥಾನ ಹಂಚಿಕೆ ಕುತೂಹಲರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ ? ಒಂದು ವೇಳೆ ಮುಂದುವರೆದರೆ ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಈ ಬಾರಿ ಜೆಡಿಎಸ್ ಅಥವಾ ಬಿಜೆಪಿ ಪೈಕಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಕ್ಷೇತ್ರದಲ್ಲಿ ಪಕ್ಷಗಳ ಬಲಾಬಲ ಎಷ್ಟಿದೆ ?ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ಈ ಮೂರು ಜಿಲ್ಲೆಗಳಿಂದ 5 ಲೋಕಸಭಾ ಹಾಗೂ 36 ವಿಧಾನಸಭಾ ಕ್ಷೇತ್ರಗಳಿವೆ. 2020ರ ಚುನಾವಣೆ ಸಮಯದಲ್ಲಿ 4 ಬಿಜೆಪಿ, 1 ಕಾಂಗ್ರೆಸ್ ಲೋಕಸಭಾ ಸದಸ್ಯರಿದ್ದರು. ರಾಜರಾಜೇಶ್ವರಿ ಕ್ಷೇತ್ರ ಹೊರತುಪಡಿಸಿ 14 - ಬಿಜೆಪಿ, 14 - ಕಾಂಗ್ರೆಸ್ , 6 - ಜೆಡಿಎಸ್ ಹಾಗೂ 1 ಪಕ್ಷೇತರ ಶಾಸಕರು ಇದ್ದರು. ಈಗ ಬಿಜೆಪಿ - 4, ಕಾಂಗ್ರೆಸ್ - 1 ಲೋಕಸಭಾ ಸದಸ್ಯರಿದ್ದರೆ, 2023ರ ವಿಧಾನಸಭಾ ಚುನಾವಣೆ ತರುವಾಯ ಕಾಂಗ್ರೆಸ್ - 18, ಬಿಜೆಪಿ - 17, ಜೆಡಿಎಸ್ - 01 ಶಾಸಕರನ್ನು ಹೊಂದಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶಕ್ತಿ ವೃದ್ಧಿಸಿಕೊಂಡಿದ್ದರೆ, ಜೆಡಿಎಸ್ ಬಲ ಪೂರ್ಣ ಪ್ರಮಾಣದಲ್ಲಿ ಕುಸಿದಿದೆ.
ಆಕಾಂಕ್ಷಿಗಳು ಯಾರ್‍ಯಾರು ?ಕಾಂಗ್ರೆಸ್ ನಿಂದ ಪುಟ್ಟಣ್ಣನ ಹೆಸರು ಅಧಿಕೃತ ಘೋಷಣೆ, ಜೆಡಿಎಸ್ ನಲ್ಲಿ ಎ.ಪಿ.ರಂಗನಾಥ್ ಹಾಗೂ ಬಿಜೆಪಿಯಿಂದ ಡಾ.ಅಪ್ಪಾಜಿಗೌಡ ಸಂಭವನೀಯರಾಗಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಭಾರತ ಚುನಾವಣಾ ಆಯೋಗ ಘೋಷಿಸಿದೆ.
ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಫೆ.16 ರಂದು ಚುನಾವಣೆ ನಡೆಯಲಿದೆ.ಅಧಿಸೂಚನೆ ದಿನಾಂಕ: ಜ.23
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜ.30ನಾಮಪತ್ರ ಪರಿಶೀಲನೆ: ಜ.31ನಾಮಪತ್ರ ಹಿಂಪಡೆಯಲು ಕೊನೆಯ ದಿನ:ಫೆ.2
ಮತದಾನ ದಿನಾಂಕ: ಫೆ.16ಮತದಾನ ಸಮಯ: ಬೆಳಗ್ಗೆ 8 ರಿಂದ ಸಂಜೆ 4
ಮತ ಎಣಿಕೆ ದಿನಾಂಕ: ಫೆ.20