ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಂಬರುವ ಲೋಕಸಭೆ ಚುನಾವಣೆಯ ನೀತಿ ಸಂಹಿತಿ ಜಾರಿಯಾಗುವ ಮೊದಲೇ ಚಿತ್ರದುರ್ಗದಲ್ಲಿ ನಿರ್ಮಿಸ ಲಾದ ಅವೈಜ್ಞಾನಿಕ ಡಿವೈಡರ್ ಗಳ ತೆರವು ಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ನಿರ್ಮಿಸಿರುವ ಡಿವೈಡರ್ ಗಳ ತೆರವುಗೊಳಿಸುವ ಬಗ್ಗೆ ವಿಚಕ್ಷಣದಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಿವೀಕ್ಷಣಾ ವರದಿ ನಂತರ ವರದಿಯಲ್ಲಿ ಸೂಚಿಸಿರುವಂತೆ ಡಿವೈಡರ್ ತೆರವುಗೊಳಿಸಬೇಕು. ಅನಾವಶ್ಯಕ ಡಿವೈಡರ್‌ಗಳ ತೆರವುಗೊಳಿಸಬೇಕು ಎಂಬುದು ಜನರ ಬೇಡಿಕೆ ಯಾಗಿದೆ.ಎಲ್ಲೆಲ್ಲಿ ಅವಶ್ಯ ಇದೆಯೋ ಆ ಕಡೆ ಡಿವೈಡರ್‌ಗಳನ್ನು ಉಳಿಸಿಕೊಂಡು, ಉಳಿದ ಕಡೆ ತೆರವುಗೊಳಿಸಬೇಕು. ಗಾಂಧಿ ಸರ್ಕಲ್ ನಲ್ಲಿ ಒನ್ ವೇ ನಲ್ಲಿಯೂ ಡಿವೈಡರ್ ಹಾಕಿದ್ದೀರಾ ಇದು ಸರಿನಾ ಎಂದವರು ಪ್ರಶ್ನಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಲೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ, ಡಿವೈಡರ್ ಗಳು ನಿಯಮಾನುಸಾರ ಇದೆಯೋ ಇಲ್ಲವೋ ಎಂಬುದನ್ನು ತನಿಖಾ ತಂಡ ಪರಿಶೀಲಿಸಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದರು.ಜಿಲ್ಲೆಯಲ್ಲಿ ಬರುವ ಬೇಸಿಗೆಯಲ್ಲಿ ಅಂದಾಜು 278 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲಿಯೂ ಕುಡಿವ ನೀರಿನ ದೂರಗಳು ಬಾರದಂತೆ ಎಚ್ಚರವಹಿಸಬೇಕೆಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 278 ಗ್ರಾಮ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ. ಹೀಗಾಗಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಲು ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಬರ ಪರಿಸ್ಥಿತಿಯ ತುರ್ತು ನಿರ್ವಹಣೆಗಾಗಿ ಜಿಲ್ಲೆಗೆ ಈಗಾಗಲೆ 9 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಮೇವು ಪೂರೈಕೆ, ಟ್ಯಾಂಕರ್ ಮೂಲಕ ನೀರು ಸರಬರಾಜು, ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆಯುವುದು ಹಾಗೂ ತುರ್ತು ಪೈಪ್‍ಲೈನ್ ಕಾಮಗಾರಿಗಳಿಗೆ ಹಾಗೂ ತಾತ್ಕಾಲಿಕ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸಿ, ಬರ ಪರಿಸ್ಥಿತಿ ನಿರ್ವಹಿಸಲಾಗುವುದು ಎಂದರು.
ಬೆಳೆ ಪರಿಹಾರ ಪಾವತಿಯಲ್ಲಿ ದುರುಪಯೋಗ ತಡೆಯಲು ಈ ಬಾರಿ ಫ್ರುಟ್ಸ್ ತಂತ್ರಾಂಶ ಹಾಗೂ ಬೆಳೆ ಕಟಾವು ಸಮೀಕ್ಷೆ ಆಧಾರದಲ್ಲಿ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ರಾಜ್ಯ ಸರ್ಕಾರದಿಂದಲೇ ರೈತರಿಗೆ ಗರಿಷ್ಟ 2 ಸಾವಿರ ಪರಿಹಾರವನ್ನು ಪಾವತಿಸಲು ಅಗತ್ಯ ದತ್ತಾಂಶವನ್ನು ಈಗಾಗಲೇ ಸಲ್ಲಿಸಲಾಗಿದ್ದು, ಶೀಘ್ರವೇ ಪರಿಹಾರ ಮೊತ್ತ ರೈತರಿಗೆ ಪಾವತಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಮಂಜುನಾಥ್ ತಿಳಿಸಿದರು.ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಯಾವುದೇ ಹಾಸ್ಟೆಲ್‍ಗಳಿಗೆ ಗ್ರಾಮೀಣ ಭಾಗಗಳಿಂದ ಎಷ್ಟೇ ವಿದ್ಯಾರ್ಥಿಗಳು ಬಂದರೂ ಅಂತಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದಾಖಲಿಗೆ ನಿರಾಕರಿಸಬಾರದು ಎಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ, ನೇರ ಸಾಲ ಮತ್ತಿತರ ಯೋಜನೆಗಳಿಗೆ ಆನ್‍ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೆ ನಿಗದಿತ ಗುರಿ ಸಂಖ್ಯೆ ಮಾತ್ರ ಕೇವಲ ಬೆರಳಣಿಕೆಯಷ್ಟು ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸರ್ಕಾರದ ಸವಲತ್ತು ದೊರೆಯುವಂತಾಗಬೇಕು ಎಂದರು.ಹೊಸ ಟೆಂಡರ್ ಕರೆಯಲು ಸೂಚನೆ
ಜಿಲ್ಲೆಯ ವಸತಿ ನಿಲಯಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಸರಬರಾಜು, ಪ್ರತಿ ದಿನ ತಾಜಾ ಸೊಪ್ಪು, ತರಕಾರಿ ಖರೀದಿ ಸುವ ವ್ಯವಸ್ಥೆಯಾಗಬೇಕು. ಇದು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಈ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್ ಕರೆಯುವಂತೆ ಸಚಿವರು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಸೂಚನೆ ನೀಡಿದರು. ಮಕ್ಕಳ ಊಟದಲ್ಲಿ ರಾಜಕೀಯ ಮಾಡುವಂತಹ ಟೆಂಡರ್‌ದಾರರು ನಮಗೆ ಬೇಡ. ಹೈಕೋರ್ಟ್ ಹೊಸ ಟೆಂಡರ್ ಕರೆಯಲು ತಿಳಿಸಿದೆ. ಹೀಗಾಗಿ ಹೊಸ ಟೆಂಡರ್ ಕರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸಭೆಯಲ್ಲಿ ಇದ್ದರು.