ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುತ್ತಿರುವ ಸಮಸ್ಯೆ ನೀಗಿಸಲು 2030ರ ವೇಳೆಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಗುರಿ ಹೊಂದಲಾಗಿದ್ದು, ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಒಂದರಲ್ಲೇ 900 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಅದನ್ನು ನಿವಾರಿಸಲು 2030ರ ವೇಳೆಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಬೆಂಗಳೂರಿನ ಜನರು ಕೈ ಜೋಡಿಸಬೇಕು. ಆಗ ಮಾತ್ರ ಸರ್ಕಾರದ ಉದ್ದೇಶ ಈಡೇರಲಿದೆ. ಇನ್ನು, ಮಾಲಿನ್ಯ ನಿಯಂತ್ರಣ ಮಂಡಳಿ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದರು.ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂದು ಟೀಕಿಸಲಾಗುತ್ತದೆ. ಬೆಂಗಳೂರನ್ನು ಗಾಬ್ರೇಜ್ ನಗರನ್ನಾಗಿಸುವುದು ಯಾವುದೇ ಸರ್ಕಾರದ ಉದ್ದೇಶವಲ್ಲ. ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮುಕ್ತ ನಗರವಾಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಜನರು ಹಸಿ ಮತ್ತು ಒಣ ತ್ಯಾಜ್ಯಗಳ ವಿಂಗಡಣೆ, ಕೈಗಾರಿಕೆಗಳು ಪರಿಸರಕ್ಕೆ ಹಾನಿಯಾಗದಂತೆ ತ್ಯಾಜ್ಯ ನಿರ್ವಹಣೆ ಮಾಡುವುದು, ತ್ಯಾಜ್ಯ ನೀರು ಸಂಸ್ಕರಿಸುವುದರಿಂದ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದರು.
ಕೇಂದ್ರ ಸರ್ಕಾರದ ವರದಿಯಂತೆ ದೇಶದ 131 ನಗರಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಮಾಲಿನ್ಯ ಹೊಂದಿವೆ. ಅದರಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮತ್ತು ಕಲಬುರಗಿ ಕೂಡ ಸೇರಿವೆ. ಇದು ಆತಂಕದ ವಿಷಯವಾಗಿದ್ದು, ಜನರು ತಮ್ಮ ನಗರ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನಹರಿಸಬೇಕು. ಸಾಲುಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಗೆ ಶ್ರೇಷ್ಠ ಉದಾಹರಣೆಯಾಗಿದ್ದಾರೆ. ಅವರು ಇತ್ತೀಚೆಗೆ ನಿಧನರಾದರೂ ಅವರು ಮಕ್ಕಳಂತೆ ಬೆಳೆಸಿದ ಮರಗಳು ಈಗಲೂ ನಮಗೆ ಕಾಣಸಿಗುತ್ತವೆ. ಪ್ರತಿಯೊಬ್ಬರೂ ಸಾಲುಮರದ ತಿಮ್ಮಕ್ಕ ಆಗುವುದಕ್ಕೆ ಪಣ ತೊಡಬೇಕು ಎಂದು ಆಶಿಸಿದರು.ಬಾಕ್ಸ್...
ತಿಮ್ಮಕ್ಕ ಹೆಸರಲ್ಲಿ ಪ್ರಶಸ್ತಿಗೆ ಸೂಚನೆರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾಲುಮರದ ತಿಮಕ್ಕ ಹೆಸರಿನಲ್ಲಿ 1 ಕೋಟಿ ರು. ದತ್ತಿ ನಿಧಿ ಸ್ಥಾಪಿಸಿ, ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. ಆ ಹಣದ ಮೇಲೆ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿ 5 ಮಂದಿ ಪರಿಸರವಾದಿಗಳಿಗೆ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು. ಅದಕ್ಕೆ ಸರ್ಕಾರದಿಂದಲೂ ಆರ್ಥಿಕ ನೆರವು ನೀಡಲಾಗುವುದು ಎಂದು ಸಿದ್ದರಾಮಯ್ಯ ಸೂಚಿಸಿದರು.ನಾವು ಪೂಜಿಸುವ ಪ್ರಕೃತಿ ರಕ್ಷಿಸಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಅರಳಿ ಮರ, ಬೇವಿನ ಮರ, ಬನ್ನಿ ಮರಗಳನ್ನು ಪೂಜೆ ಮಾಡಲಾಗುತ್ತದೆ. ಹಾಗೆಯೇ, ಹಲವು ಪ್ರಾಣಿಗಳನ್ನು ದೇವರ ವಾಹನ ಎಂದು ಪರಿಗಣಿಸುತ್ತೇವೆ. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಾವು ಇರಲಿ ಅಥವಾ ಇಲ್ಲದಿರಲಿ ಪರಿಸರ, ನೀರು, ಗಾಳಿ, ಬೆಳಕು ಶಾಶ್ವತವಾಗಿ ಇರುತ್ತವೆ ಎಂದರು.ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸಿದವರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವರಾದ ಎನ್. ಚಲುವರಾಯಸ್ವಾಮಿ, ಡಾ. ಸುಧಾಕರ್, ದಿನೇಶ್ ಗುಂಡೂರಾವ್, ಬಿ.ಎಸ್. ಸುರೇಶ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಸುಧಾಮ್ ದಾಸ್ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))