ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಮಂಗಳವಾರ (ಸೆ.10) ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ವಿಭಾಗಗಳಲ್ಲಿ ರ್‍ಯಾಂಕ್ ಪಡೆದಿರುವ 158 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 140 ಮಂದಿಗೆ ಪಿಎಚ್‌ಡಿ ಸೇರಿದಂತೆ ಒಟ್ಟು 26,210 ವಿದ್ಯಾರ್ಥಿಗಳು ವಿವಿಧ ಪದವಿ ಪಡೆಯಲಿದ್ದಾರೆ.ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ರಾಜ್ಯ ಆಯುಕ್ತ ಕೆ.ಎಸ್.ರಾಜಣ್ಣ ಅವರಿಗೆ ಈ ಬಾರಿಯ ಗೌರವ ಡಾಕ್ಟರೆಟ್ ನೀಡಿ ಗೌರವಿಸಲಾಗುವುದು ಎಂದು ವಿವಿಯ ಕುಲಪತಿ ಡಾ। ಎಸ್.ಎಂ.ಜಯಕರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ವಹಿಸಲಿದ್ದಾರೆ. ಯುಜಿಸಿ ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ 14,063 ವಿದ್ಯಾರ್ಥಿನಿಯರು, 12,007 ವಿದ್ಯಾರ್ಥಿಗಳು ಸೇರಿ ಒಟ್ಟು 26,210 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ ರ್‍ಯಾಂಕ್ ಪಡೆದಿರುವ 158 ವಿದ್ಯಾರ್ಥಿಗಳು ಒಟ್ಟು 308 ಚಿನ್ನದ ಪದಕ, 79 ನಗದು ಪ್ರಶಸ್ತಿ ಮತ್ತು 140 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಸ್ವೀಕರಿಸಲಿದ್ದಾರೆ. ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂ.ವಿವಿಯ ರಸಾಯನ ಶಾಸ್ತ್ರ ವಿಭಾಗದ ಎಸ್.ಅನ್ನಪೂರ್ಣ ಒಟ್ಟು 9 ಚಿನ್ನದ ಪದಕ ಗಳಿಸುವ ಮೂಲಕ ಅತಿ ಹೆಚ್ಚು ಪದಕ ಗಳಿಸಿದ್ದಾರೆ. ಪದವಿ ವಿಭಾಗದಲ್ಲಿ ಎಂ.ಅನುರಾಧಾ ಬಿಎಸ್ಸಿ ವಿಭಾಗದಲ್ಲಿ 9 ಚಿನ್ನದ ಪದಕ ಗಳಿಸಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಶೇಕ್ ಲತೀಫ್, ಮೌಲ್ಯಮಾಪನ ಕುಲಸಚಿವ ಡಾ। ಶ್ರೀನಿವಾಸ್ ಉಪಸ್ಥಿತರಿದ್ದರು.