ಕೊಚ್ಚಿಹೋದ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ: ಅಧಿಕಾರಿಗಳನ್ನು ತರಾಟೆಗೈದ ಶಾಸಕ ಭೀಮಣ್ಣ ನಾಯ್ಕ

| Published : May 25 2025, 01:20 AM IST

ಕೊಚ್ಚಿಹೋದ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ: ಅಧಿಕಾರಿಗಳನ್ನು ತರಾಟೆಗೈದ ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಲಕ್ಷ್ಯ ತೋರಿದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಶಿರಸಿ: ತಾಲೂಕಿನ ಬೆಣ್ಣೆಹೊಳೆಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿರುವ ಸ್ಥಳಕ್ಕೆ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳ ಜತೆ ತೆರಳಿ, ಪರಿಶೀಲಿಸಿ ಖಡಕ್ ಸೂಚನೆ ನೀಡಿದರು.ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗದಂತೆ ಸಂಚಾರ ಸ್ಥಗಿತಗೊಳಿಸಲು ಜಿಲ್ಲಾಡಳಿತದ ಬಳಿ ಮನವಿ ಮಾಡಿ ನಿರ್ಲಕ್ಷ್ಯ ತೋರಿದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರಲ್ಲದೇ, ಈ ಮಾರ್ಗದಲ್ಲಿ ಹಲವರು ಸಂಚಾರ ನಿರ್ಬಂಧ ಬೇಡ ಎಂದರೂ ಕೆಲಸ ಬೇಗ ಆಗಲಿ ಎಂದು ಎಲ್ಲರನ್ನೂ ಎದುರು ಹಾಕಿಕೊಂಡು ಸಂಚಾರ ನಿರ್ಬಂಧ ಮಾಡಿಸಿದೆವು. ಈಗ ಏನು ಉತ್ತರ ಕೊಡೋಣ ಅವರಿಗೆಲ್ಲ ಎಂದು ಹರಿಹಾಯ್ದ ಶಾಸಕರು, ಕೇವಲ ಬೆಣ್ಣೆಹೊಳೆ ಸೇತುವೆ ಅಲ್ಲ, ಉಳಿದ ಚಳ್ಳೆ ಹಳ್ಳ, ಮೊಸಳೆಗುಂಡಿ, ಚಂಡಮುರಕನಹಳ್ಳ ಸೇತುವೆಗಳ ಕಾಮಗಾರಿಯೂ ಹಾಗೇ ಇದೆ. ಸಮಯ ಕೊಟ್ಟರೂ ಅವಧಿಯೊಳಗೆ ಪೂರ್ಣ ಮಾಡಿಲ್ಲ ಎಂದರೆ ಇಷ್ಟೊಂದು ದೊಡ್ಡ ಗುತ್ತಿಗೆ ಸಂಸ್ಥೆ ಆಗಿಯೂ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಬುಧವಾರದಿಂದ ಬೆಣ್ಣೆಹೊಳೆ ಸೇತುವೆ ಲಘು ವಾಹನಗಳಿಗೆ ತೆರವು ಮಾಡುವುದಾಗಿ ಆರ್‌ಎನ್‌ಎಸ್ ಎಂಜಿನಿಯರ್ ನಿತಿನ್, ವಿಶ್ವನಾಥ ಶೇಟ್ಟಿ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದಾಗ, ಶಾಲೆಗಳು ಆರಂಭವಾದ ಬಳಿಕವೂ ಆ ಮಕ್ಕಳಿಗೆ ಕೂಡ ತೊಂದರೆ ಆಗಬಾರದು. ಆ ಬಗ್ಗೆ ಈಗಿನಿಂದಲೇ ಲಕ್ಷ್ಯ ವಹಿಸಬೇಕು. ರೈತರಿಗೆ, ಕಾರ್ಮಿಕರಿಗೆ ರಾಗಿಸಹೊಳ್ಳಿ, ಬಂಡಲ ಸಂಪರ್ಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ರೇಷನ್ ತರಲೂ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸ್ಥಳದಲ್ಲಿದ್ದ ಎಸಿ ಕಾವ್ಯಾರಾಣಿ ಕೆ. ಹಾಗೂ ವಾಯವ್ಯ ಸಾರಿಗೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸಹಾಯಕ ಆಯುಕ್ತೆ ಕೆ.ವಿ ಕಾವ್ಯರಾಣಿ, ಪ್ರಮುಖರಾದ ಎಸ್.ಕೆ. ಭಾಗವತ್, ಪ್ರವೀಣ ಗೌಡ, ದೇವರಾಜ ಮರಾಠಿ, ಗಜಾನನ ನಾಯ್ಕ, ಗಂಗಾಧರ ಗೌಡ ಮತ್ತಿತರರು ಇದ್ದರು.

ಶಿರಸಿ ಕುಮಟಾ ಮಾರ್ಗದ ಅಭಿವೃದ್ಧಿಗೆ ಆಗಲೆಂದು ಸಂಚಾರ ನಿರ್ಬಂಧಕ್ಕೆ ಹಲವರ ವಿರೋಧದ ನಡುವೆ ಸಹಮತ ಕೊಟ್ಟು ಮಾಡಿಸಿಕೊಟ್ಟರೂ ಸೇತುವೆ ಕಾಮಗಾರಿ ಪೂರ್ಣ ಮಾಡಿಲ್ಲ. ಜನರಿಗೆ ಉಂಟಾಗುವ ನಷ್ಟಕ್ಕೆ, ಕಷ್ಟಕ್ಕೆ ಯಾರು ಹೊಣೆ? ಜಿಲ್ಲಾಧಿಕಾರಿ ಬಳಿಯೂ ಈ ಬಗ್ಗೆ ದೂರುವೆ ಎನ್ನುತ್ತಾರೆ ಶಾಸಕ ಭೀಮಣ್ಣ ನಾಯ್ಕ.