ನವಲಗುಂದ:
ಬೆಣ್ಣಿಹಳ್ಳ ಪ್ರವಾಹ ಬಂದರೆ ಸಮುದ್ರದಂತೆ ನೀರು ನುಗ್ಗಿ ರೈತರ ಜಮೀನು ಹಾಗೂ ಗ್ರಾಮಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಬೆಣ್ಣಿಹಳ್ಳ ಅಭಿವೃದ್ಧಿ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಹೇಳಿದರು.ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬೆಣ್ಣಿಹಳ್ಳ ಅಗಲೀಕರಣ ಹಾಗೂ ಗ್ರಾಮಗಳ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, 2025-26ನೇ ಸಾಲಿನ ಆಯವ್ಯಯದಲ್ಲಿ ₹ 200 ಕೋಟಿ ಅನುದಾನ ಘೋಷಿಸಿದ್ದು ನಂತರ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಹಳ್ಳವನ್ನು ಅಗಲೀಕರಣ ಮಾಡಿ ಅಲ್ಲಲ್ಲಿ ಸೇತುವೆ, ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದರು.ಯಮನೂರ ಚಾಂಗದೇವ ಜಾತ್ರೆಗೆ ಬರುವ ಭಕ್ತರಿಗೆ ಸ್ನಾನ ಮಾಡಲು ಬೆಣ್ಣಿಹಳ್ಳಕ್ಕೆ ಮೆಟ್ಟಿಲು ಹಾಗೂ ಸ್ನಾನಗೃಹ ನಿರ್ಮಿಸುವ “ಯಮನೂರ ಆರತಿ” ಎಂಬ ಹೆಸರಿನಲ್ಲಿ ₹11 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದ ಅವರು, ಮಳೆಗಾಲ ಆರಂಭ ಆಗುತ್ತಿರುವುದರಿಂದ ಕಾಮಗಾರಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.ನಂತರ ತಡಹಾಳ ಗ್ರಾಮದ ಹತ್ತಿರ ಬೆಣ್ಣಿಹಳ್ಳ-ದೊಡ್ಡಹಳ್ಳ ಪ್ರವಾಹ ಬಂದು ಸೇತುವೆ ಕುಸಿದು ಹೋಗಿದ್ದು ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹80 ಕೋಟಿ ಅನುದಾನ ಬಿಡುಗಡೆಯಾಗಿದೆ. ಡಿಪಿಆರ್ ತಯಾರಿಸಿ ಟೆಂಡರ್ ಕರೆಯುವ ಹಂತಕ್ಕೆ ಹೋಗಿದೆ. ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಓಡಾಡಲು ಸ್ಟೀಲ್ ಬ್ರಿಡ್ಜ್ ನಿರ್ಮಿಸುತ್ತಿರುವುದನ್ನು ಹಿರಿಯ ಅಧಿಕಾರಿಗಳ ತಂಡದೊಂದಿಗೆ ವೀಕ್ಷಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೆಣ್ಣಿಹಳ್ಳ ಪ್ರಗತಿ ಹಾಗೂ ತಡಹಾಳ ಹತ್ತಿರವಿರುವ ನೂತನ ಸೇತುವೆ ಕಾಮಗಾರಿಯ ಡಿಪಿಆರ್‌ನ್ನು ಪಿಪಿಟಿ ಮೂಲಕ ಗಮನಿಸಿ ಸಲಹೆ ನೀಡಿದರು.
ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ನವಲಗುಂದ ಪಟ್ಟಣದ 24×7 ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ, ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಬೆಣ್ಣಿಹಳ್ಳ, ಲೋಕೋಪಯೋಗಿ ಇಲಾಖೆಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಚಕ್ಕಡಿ ದಾರಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ, ಕುಡಿಯುವ ನೀರಿನ ಕಾಮಗಾರಿಯನ್ನು ಅಧಿಕಾರಿಗಳು ವೀಕ್ಷಿಸುತ್ತಿರುವುದು ಸಂತಸ ತಂದಿದೆ ಎಂದರು.ಈ ವೇಳೆ ಎಸ್ಪಿ ಗುಂಜನ್ ಆರ್ಯ, ಮಹಾವೀರ ಗಣಿ, ನೀರಾವರಿ ಇಲಾಖೆ ಎಂಜಿನಿಯರ್ ರಾಘವೇಂದ್ರ ಜಾಲಗಾರ, ತಹಸೀಲ್ದಾರ್ ಸುಧೀರ ಸಾಹುಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ. ಮಜ್ಜಗಿ, ವಿವಿಧ ಇಲಾಖೆ ಅಧಿಕಾರಿಗಳಾದ ರವೀಂದ್ರಗೌಡ ಪಾಟೀಲ, ರಾಮಚಂದ್ರ ಹೊಸಮನಿ, ಸೋಮನಗೌಡ ಪಾಟೀಲ, ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಸಿಪಿಐ ರವಿ ಕಪ್ಪತ್ತವರ, ಪಿಎಸ್ಐ ಜನಾರ್ಧನ ಬಟ್ರಳ್ಳಿ, ಸದುಗೌಡ ಪಾಟೀಲ, ದಾವಲಸಾಬ ಖುದ್ದನ್ನವರ, ವರ್ದಮಾನಗೌಡ ಹಿರೇಗೌಡರ, ಶಿವಾನಂದ ಭೂಮಣ್ಣವರ (ಹುಬ್ಬಳ್ಳಿ), ಕಿಮ್ಸ್ ನಾಮನಿರ್ದೇಶಿತ ಸದಸ್ಯ ಎಂ.ಎಸ್. ರೋಣದ ಸೇರಿದಂತೆ ಹಲವರಿದ್ದರು.