ಹಾವೇರಿ: ದಾವಣಗೆರೆಯ ಎಸ್.ಎಸ್. ನಾರಾಯಣ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದು, ಮಧ್ಯ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಸಂಕೀರ್ಣವಾದ ಮಾಡಿಫೈಯ್ಡ್‌ ಬೆಂಟಾಲ್ ಪ್ರೊಸೀಜರ್ ಎಂಬ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಆಸ್ಪತ್ರೆಯ ಕಾರ್ಡಿಯೋ ಥೊರಾಸಿಕ್ ವ್ಯಾಸ್ಕುಲರ್ ಸರ್ಜನ್ ಡಾ. ಗೌತಮ್ ಎ. ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ದಾವಣಗೆರೆ ಮೂಲದ 43 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಈ ರೋಗಿಯ ಹೃದಯದ ಪ್ರಮುಖ ರಕ್ತನಾಳವು ಅಸಹಜವಾಗಿ ಉಬ್ಬಿಕೊಂಡಿದ್ದು, ಅದು ಯಾವುದೇ ಕ್ಷಣದಲ್ಲಿ ಛಿದ್ರಗೊಳ್ಳುವ ಅಪಾಯವಿತ್ತು. ಈ ಗಡ್ಡೆಯಂತಹ ಊತ ಹೃದಯದ ಬಲಭಾಗದ ಮೇಲಿನ ಕೋಣೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿತ್ತು. ಇದು ಪ್ರಾಣಕ್ಕೆ ಅಪಾಯ ತರುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.ಶಸ್ತ್ರಚಿಕಿತ್ಸೆ ವೇಳೆ ರೋಗಿಯ ಹಾನಿಗೊಳಗಾಗಿದ್ದ ಮಹಾಅಪಧಮನಿಯ ಕವಾಟ, ಅದರ ಬುಡ ಮತ್ತು ಊದಿಕೊಂಡಿದ್ದ ಭಾಗವನ್ನು ತೆಗೆದುಹಾಕಿ, ಅದರ ಜಾಗದಲ್ಲಿ ಕೃತಕ ಸಿಂಥೆಟಿಕ್ ಗ್ರಾಫ್ಟ್‌ ಅಳವಡಿಸಲಾಗಿದೆ. ಅತ್ಯಂತ ಜಟಿಲವಾದ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ ಸುಗಮವಾಗಿರುವಂತೆ ನೋಡಿಕೊಳ್ಳಲು ಕೊರೊನರಿ ಬಟನ್‌ಗಳನ್ನು ಕೃತಕ ಗ್ರಾಫ್ಟ್‌ನಲ್ಲಿ ಯಶಸ್ವಿಯಾಗಿ ಮರುಜೋಡಿಸಲಾಗಿದೆ. ಈಗ ರೋಗಿಯು ಚೇತರಿಸಿಕೊಂಡಿದ್ದಾರೆ. ನಂತರ ನಡೆಸಿದ ತಪಾಸಣೆಗಳಲ್ಲಿ ಹೃದಯದ ಕಾರ್ಯನಿರ್ವಹಣೆ ಮತ್ತು ಹೊಸ ಕವಾಟದ ಚಲನೆ ಉತ್ತಮವಾಗಿರುವುದು ದೃಢಪಟ್ಟಿದೆ. ರೋಗಿಯೂ ಸಂಪೂರ್ಣ ಗುಣಮುಖರಾಗಿದ್ದು, ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.ಈ ಸಾಧನೆಯು ಮಧ್ಯ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹಿಂದೆ ಗಂಭೀರ ಸಮಸ್ಯೆ ಇರುವವರು ಬೆಂಗಳೂರು, ಹೈದರಾಬಾದ್‌ಗೆ ತೆರಳಬೇಕಿತ್ತು. ತುರ್ತು ಸಂದರ್ಭದಲ್ಲಿ ಅಷ್ಟು ದೂರ ಪ್ರಯಾಣಿಸಲು ಕಷ್ಟವಾಗಿ, ರೋಗಿಗಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿತ್ತು. ಅಲ್ಲದೇ ಖರ್ಚು ಕೂಡ ಅಧಿಕ ತಗಲುತ್ತಿತ್ತು. ಆದರೀಗ ದಾವಣಗೆರೆಯ ಎಸ್‌ಎಸ್ ನಾರಾಯಣ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲೇ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ. ಆದ್ದರಿಂದ ಜಿಲ್ಲೆಯ ರೋಗಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಮಾರ್ಕೆಟಿಂಗ್ ಮುಖ್ಯಸ್ಥರಾದ ಪ್ರಶಾಂತ, ಪಿಆರ್‌ಒ ಪ್ರಸನ್ನಕುಮಾರ ಇದ್ದರು.