ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಅವರನ್ನು ಕರ್ತವ್ಯಲೋಪದ ಆಧಾರದ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣ ಅಮಾನತು ಮಾಡುವಂತೆ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.ಕೆಲವು ತಿಂಗಳಿಂದ ಶಿಕ್ಷಣಾಧಿಕಾರಿ ರಾಜೇಗೌಡ ವಿರುದ್ಧ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ 7 ವಿವಿಧ ದೂರುಗಳ ಆಧಾರದ ಮೇಲೆ ಅವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ರಾಜೇಗೌಡ ಮೇಲಿರುವ ಆರೋಪಗಳ ಪಟ್ಟಿ:
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಶಿಕ್ಷಕರ ಸಂಘದ ನಿರ್ದೇಶಕರನ್ನು ಅವಮಾನಿಸಿ ರಾತ್ರಿಯ ಸಮಯದಲ್ಲಿ ಕುಡಿದು ಫೋನ್ ಮಾಡಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವುದು. ಶಿಶುಪಾಲನೆ ರಜೆ ನೀಡಲು ಹಣ ಪಡೆದಿರುವುದು, ಅತಿಥಿ ಶಿಕ್ಷಕರಿಂದ ಹಣ ಪಡೆದಿರುವುದು, ನಿವೃತ್ತ ಶಿಕ್ಷಕರಿಂದ ಹಣ ಪಡೆದಿರುವುದು, ಹಳೇ ವಿದ್ಯಾರ್ಥಿ ಸಂಘದಿಂದ ಎಚ್.ಪಿ.ಬಿ.ಎಸ್ ಶಾಲೆಯ ಹಣವನ್ನು ವ್ಯತ್ಯಾಸ ಮಾಡಿರುವುದು. ಕ್ಷೇತ್ರ ಕ್ರೀಡಾ ಕೂಟ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕರ ಹೆಸರನ್ನು ಮುದ್ರಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಕಲಾವತಿ, ಇವರಿಗೆ ರಾತ್ರಿಯ ವೇಳೆ ಫೋನ್ ಕರೆ ಮಾಡಿ ಕೊಲೆ ಮಾಡುತ್ತೇನೆಂದು ಹೆದರಿಸಿ ಕೊಲೆ ಬೆದರಿಕೆ ಹಾಕಿರುವುದು ಸೇರಿದೆ.ಮಹಿಳಾ ಶಿಕ್ಷಕಿಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಶಿಷ್ಟಾಚಾರ ಉಲ್ಲಂಘನೆ, ಸರ್ಕಾರಿ ಕೆಲಸ ನಿರ್ವಹಿಸಲು ಲಂಚ ಪಡೆದಿರುವುದು ಮತ್ತು ಶಿಕ್ಷಕರ ನಡುವೆ ಸೌಜನ್ಯ ಪಾಲನೆ ಮಾಡದೇ ಅಸಭ್ಯ ರೀತಿಯಲ್ಲಿ ವರ್ತನೆ, ತೀವ್ರತರ, ಗಂಭೀರ ಸ್ವರೂಪದ ಆರೋಪಗಳು ಉಪನಿರ್ದೇಶಕರ ವರದಿ ಮತ್ತು ಆಯುಕ್ತರ ಪ್ರಸ್ತಾವನೆ ಮತ್ತು ಅದರೊಂದಿಗಿನ ದಾಖಲೆಗಳಿಂದ ಮೇಲ್ನೋಟಕ್ಕೆ ನೈಜವೆಂದು ಕಂಡುಬರುತ್ತದೆ. ಅಲ್ಲದೇ ಸದರಿ ಆಪಾದಿತ ಅಧಿಕಾರಿಯವರನ್ನು ಅದೇ ಹುದ್ದೆಯಲ್ಲಿಯೇ ಮುಂದುವರಿಸಿದ್ದಲ್ಲಿ ಆಪಾದನೆಗಳಿಗೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಗಳನ್ನು ತಿದ್ದುವ, ನಾಶಪಡಿಸುವ ಸಂಭವ ಇರುವ ಹಿನ್ನೆಲೆಯಲ್ಲಿ ಸದರಿ ಅಧಿಕಾರಿ ತರವಲ್ಲದ ರೀತಿಯಲ್ಲಿ ನಡೆದುಕೊಂಡು ದುರ್ನಡತೆ ಎಸಗಿದ್ದು ಇವರನ್ನು ಕಾರ್ಯಕಾರಿ ಹುದ್ದೆಯಲ್ಲಿ ಮುಂದುವರಿಸುವುದು ಸೂಕ್ತವಲ್ಲವೆಂದು ತೀರ್ಮಾನಿಸಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಸರ್ಕಾರವು ನಿರ್ಧರಿಸಿದೆ ಎಂದು ಆದೇಶ ಹೊರಡಿಸಿದ್ದಾರೆ. ಶಿಕ್ಷಕರ ನಿಟ್ಟುಸಿರು:ಶಿಕ್ಷಣಾಧಿಕಾರಿಯಾಗಿ ಬಂದ ರಾಜೇಗೌಡ ಮೊದಮೊದಲು ಅಮಾಯಕನಂತೆ ಕಂಡುಬಂದರೂ ನಂತರದಲ್ಲಿ ಇವರ ರಾಕ್ಷಸೀ ಪ್ರವೃತ್ತಿ ಹೊರ ಬರತೊಡಗಿತ್ತು. ಇವರಿಂದ ಕಿರುಕುಳ ಅನುಭವಿಸಿದವರು ಹೇಳಲು ಆಗದೆ, ಅನುಭವಿಸಲು ಆಗದೆ ನರಳುತ್ತಿದ್ದರು. ಆದರೆ ಈಗ ಸಮಾನತ್ತು ಆದೇಶ ಬಂದ ಹಿನ್ನೆಲೆಯಲ್ಲಿ ಕಿರುಕುಳ ಅನುಭವಿಸಿದ್ದ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.ಬಾಕ್ಸ್ ನ್ಯೂಸ್
ಇತ್ತೀಚೆಗೆ ಶಾಸಕ ಎಚ್.ಕೆ.ಸುರೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ನಡುವೆ ಕ್ರೀಡಾಕೂಟದ ವೇದಿಕೆಯಲ್ಲೇ ತೀವ್ರ ಮಾತಿನ ಸಮರ ನಡೆದಿತ್ತು. ಈ ಸಂದರ್ಭದಲ್ಲಿ ಶಾಸಕರು ರಾತ್ರಿ ವೇಳೆ ಕುಡಿದು ಶಿಕ್ಷಕರಿಗೆ ಫೋನ್ ಮಾಡಿ ಹೆದರಿಸುತ್ತೀಯಾ ಎಂದು ಕಿಡಿಕಾರಿದ್ದರು. ಈ ಸಂದರ್ಭದಲ್ಲಿ ರಾಜೇಗೌಡ ಕೂಡ ಸಾಕ್ಷಿ ತೋರಿಸಿ ಎಂದು ಶಾಸಕರ ವಿರುದ್ಧ ಹರಿಹಾಯ್ದಿದ್ದರು. ಕ್ರೀಡಾಕೂಟದಲ್ಲಿ ಶಾಸಕ ಹಾಗೂ ರಾಜೇಗೌಡ ಅವರ ನಡುವೆ ನಡೆದ ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂದರ್ಭದಲ್ಲಿ ಶಾಸಕರ ವರ್ತನೆಯನ್ನು ಕೆಲವರು ಖಂಡಿಸಿದ್ದರು. ಆದರೆ ರಾಜೇಗೌಡರ ನೈಜ ಸ್ಥಿತಿ ಬಯಲಾಗಿ ಅಮಾನತುಗೊಂಡ ನಂತರ ಶಾಸಕರ ನಡೆಗೆ ಎಲ್ಲರೂ ಬೆನ್ನು ತಟ್ಟುತ್ತಿದ್ದಾರೆ. ಶಾಸಕರು ರಾಜೇಗೌಡರಿಗೆ ಸರಿಯಾಗಿಯೇ ಉಗಿದಿದ್ದಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕಂಡುಬಂತು.
ಫೋಟೋ:* ಶಾಸಕ ಸುರೇಶ್
* ಅಮಾನತುಗೊಂಡ ರಾಜೇಗೌಡ