ಸಾರಾಂಶ
ಅಂಕೋಲಾ:
ತಾಲೂಕಿನ ಬೆರಡೆ ಗ್ರಾಮಕ್ಕೆ ತೆರಳಲು ಇದ್ದ ಕಾಲುದಾರಿಯನ್ನು ಬೆಲೆಕೇರಿಯ ಭಾರತೀಯ ನೌಕಾ ದಳದ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಬಂದ್ ಮಾಡಿದ್ದಾರೆ. ಇದರಿಂದ ಬೆರಡೆಯಲ್ಲಿ ಕೃಷಿ ಕೂಲಿ ಮಾಡಿಕೊಂಡಿದ್ದ ನೂರಾರು ರೈತರು ಭೂಮಿಯಲ್ಲಿ ಉಳುಮೆ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆರಡೆ ಗ್ರಾಮದಲ್ಲಿ ಸುಮಾರು 500 ಎಕರೆಗೂ ಹೆಚ್ಚು ಕೃಷಿ ಭೂಮಿ ಇದ್ದು, ಅಲಗೇರಿ, ಬಡಗೇರಿ, ಬೆಲೆಕೇರಿ, ಭಾವಿಕೇರಿ, ಹಟ್ಟಿಕೇರಿ ಮುಂತಾದ ಊರಿನ ರೈತರು ಭೂಮಿಯನ್ನು ಹೊಂದಿದ್ದಾರೆ. ದಿನನಿತ್ಯ ಬುತ್ತಿ ಕಟ್ಟಿಕೊಂಡು ಹೋಗಿ ಕೂಲಿ ಮಾಡಿ ಮರಳುತ್ತಾರೆ.
ಕಳೆದ 20 ವರ್ಷಗಳಿಂದ ಸೀಬರ್ಡ್ ಯೋಜನೆ ಬಂದಾಗಿನಿಂದ ಸ್ಥಳೀಯ ರೈತರು ಹಾಗೂ ನೌಕಾ ದಳದ ನಡುವೆ ಬೆರಡೆ ರಸ್ತೆಯ ವಿಷಯವಾಗಿ ಕಿತ್ತಾಟ ನಡೆಯುತ್ತಲೇ ಬಂದಿದೆ. ಆದರೆ ಭಾನುವಾರ ನೌಕಾ ಸೇನಾಧಿಕಾರಿಗಳು ರಸ್ತೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಿದ್ದು ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತರಿಗೆ ಅಘಾತವಾಗಿದೆ.ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಶಾಸಕ ಸತೀಶ್ ಸೈಲ್ ವಿಷಯವನ್ನು ಸೂಕ್ಷ್ಮವಾಗಿ ಅರಿತು ಪರ್ಯಾಯ ರಸ್ತೆ ಒದಗಿಸುವ ಕುರಿತು ಚರ್ಚಿಸಿದರು. ಗ್ರಾಮಕ್ಕೆ ಇನ್ನೊಂದು ರಸ್ತೆ ಅವಕಾಶ ಇರುವ ಮಾಹಿತಿ ಪಡೆದು ಸಂಬಂಧಸಿದ ಅರಣ್ಯ ಅಧಿಕಾರಿಗಳ ಜೊತೆ ತ್ವರಿತವಾಗಿ ಫೋನ್ ಸಂಭಾಷಣೆ ನಡೆಸಿ ರಸ್ತೆ ಸಂಪರ್ಕ ಖಂಡಿತವಾಗಿ ಮಾಡಿಸಿಕೊಡುವುದಾಗಿ ವಾಗ್ದಾನ ಮಾಡಿದರು.
ಗ್ರಾಮಸ್ಥ ಸುರೇಶ ನಾಯಕ. ಮಾತನಾಡಿತಲೆತಲಾಂತರದಿಂದ ತಾಲೂಕಿನ 5 ಪಂಚಾಯಿತಿಯ ಗ್ರಾಮಸ್ಥರು ಬೆರಡೆಯಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಸೀ ಬರ್ಡ್ ಪ್ರಾಜೆಕ್ಟ್ ಬಂದ ನಂತರ ಈ ಸಮಸ್ಯೆ ಎದುರಾಗಿದೆ. 2016ರಲ್ಲಿ ಸತೀಶ್ ಸೈಲ್ ಶಾಸಕರಾಗಿದ್ದ ಸಂದರ್ಭದಲ್ಲಿ ಬಾಳೆಗುಳಿಯ ಗೋಪಾಲ ಕೃಷ್ಣ ದೇವಸ್ಥಾನದ ಕಡೆಯಿಂದ ಸುಮಾರು 2.5 ಕಿಮಿ ಅಂತರದ ರಸ್ತೆ ನಿರ್ಮಾಣಕ್ಕಾಗಿ ಪಿಡಬ್ಲ್ಯೂಡಿ ಅಧಿಕಾರಿಗಳ ಜತೆ ಚರ್ಚಿಸಿ ಅನುಷ್ಠಾನಗೊಳಿಸಲು ಚಿಂತಿಸಲಾಗಿತ್ತು. ಅದೇ ಯೋಜನೆ ಪ್ರಸ್ತುತ ಜಾರಿ ಮಾಡಿದರೆ ಒಳ್ಳೆಯದು. ಯಾವುದೇ ಇತರ ಆದಾಯವಿಲ್ಲದ ಹಾಲಕ್ಕಿ ಒಕ್ಕಲಿಗರು ಹೆಚ್ಚಾಗಿ ಬೆರಡೆಯಲ್ಲಿ ಕೂಲಿ ಮಾಡುತ್ತಿದ್ದು ರಸ್ತೆ ಇಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲದೆ ಉಪವಾಸ ಸಾಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವಾನಂದ ನಾಯ್ಕ, ಸಾಮಾಜಿಕ ಕಾರ್ಯಕರ್ತ ವಿನೋದ ಗಾಂವಕರ, ಬಾಬುರಾಯ್ ಗಾಂವಕರ, ಹಾಲಕ್ಕಿ ರೈತ ಗಣ, ಭದ್ರತಾ ಸಿಬ್ಬಂದಿಗಳಾದ ಪಿಎಸ್‌ಐ ಸುನಿಲ್ ಹುಲ್ಲೊಳಿ, ಗುಪ್ತಚರ ದಳದ ಪುನೀತ ನಾಯ್ಕ ಹಾಗೂ ಸಿಬ್ಬಂದಿ ಇದ್ದರು.