ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ೨೦೨೩ನೇ ಸಾಲಿನಲ್ಲಿ ಯುವ ಕಥೆಗಾರ ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಕೃತಿ ಆಯ್ಕೆಯಾಗಿದ್ದು, ಜೂ.೯ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತ ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ ೧೦ಗಂಟೆಗೆ ಸಮಾರಂಭ ನಡೆಯಲಿದ್ದು, ಇದೇ ವೇಳೆ ಮರು ಮುದ್ರಣಗೊಂಡಿರುವ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಅಂಕಣ ಬರಹಗಳ ಸಂಕಲನ ‘ಒರೆಗಲ್ಲು’ ಕೃತಿಯನ್ನೂ ಲೋಕಾರ್ಪಣೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ದಾರಿ ತಪ್ಪಿಸುವ ಗಿಡ’ ಕೃತಿಯ ಕರ್ತೃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮದ ಯುವ ಬರಹಗಾರ ಸ್ವಾಮಿ ಪೊನ್ನಾಚಿ ಅವರಿಗೆ ಖ್ಯಾತ ಲೇಖಕ ಪ್ರೊ.ಕಾಳೇಗೌಡ ನಾಗವಾರ ಪ್ರಶಸ್ತಿ ಪ್ರದಾನ ಮಾಡುವರು. ವಿಮರ್ಶಕಿ ಆರ್.ಸುನಂದಮ್ಮ ಕೃತಿ ಕುರಿತು ಮಾತನಾಡುವರು. ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತ ಅಧ್ಯಕ್ಷತೆ ವಹಿಸುವರು, ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಪ್ರತಿಷ್ಠಾನದ ಆಜೀವ ಸದಸ್ಯೆ ಡಿ.ಪಿ.ರಾಜಮ್ಮ ರಾಮಣ್ಣ ಭಾಗವಹಿಸುವರು ಎಂದರು.ಪ್ರಶಸ್ತಿಗಾಗಿ ಅರ್ಜಿ ಮತ್ತು ಪುಸ್ತಕಗಳನ್ನು ಆಹ್ವಾನಿಸಿದಾಗ ೩೬ ಪುಸ್ತಕಗಳು ಬಂದಿದ್ದವು. ಈ ಪೈಕಿ ‘ದಾರಿ ತಪ್ಪಿಸುವ ಗಿಡ’ ಕೃತಿ ಆಯ್ಕೆಯಾಗಿದೆ. ಸ್ವಾಮಿ ಪೊನ್ನಾಚಿ ಅವರು ರಚಿಸಿದ ಮೊದಲ ಕವನ ಸಂಕಲನ ‘ಸಾವೊಂದನ್ನು ಬಿಟ್ಟು’ ಕೃತಿಗೆ ಕನ್ನಡ ಪುಸ್ತಕ ಪ್ರಾಕಾರದ ಧನಸಹಾಯ, ಬೇಂದ್ರೆ ಗ್ರಂಥ ಬಹುಮಾನ, ಧೂಪದ ಮಕ್ಕಳು (ಕತೆಗಳು) ಕೃತಿಗೆ ಪಾಪು ಕಥಾ ಪುರಸ್ಕಾರ, ಛಂದ ಪುಸ್ತಕ ಪುರಸ್ಕಾರ, ಶಾ ಬಾಲುರಾವ್ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿವೆ ಎಂದು ತಿಳಿಸಿದರು.
‘ದಾರಿ ತಪ್ಪಿಸುವ ಗಿಡ’ ಕೃತಿಯಲ್ಲಿ ವ್ಯವಸ್ಥೆ ಕೇಂದ್ರದಾಚೆಗಿನ ಅಂಚಿನಲ್ಲಿರುವ ಬದಕು, ಬವಣೆ, ಭವಿಷ್ಯದ ಭರವಸೆಗಳನ್ನು ಭಾಷೆ ನಿರೂಪಣೆಗಳಲ್ಲಿ ಸಹಜತೆ, ಪರಿಸರ, ವ್ಯವಸ್ಥೆಗಳೊಂದಿಗಿನ ಶೀತಲ ಸಂಘರ್ಷ, ರಾಜಿಗಳು, ವರ್ತಮಾನದ ಬದುಕಿನ ಅನಿವಾರ್ಯತೆಗಳು, ಸಂಕಟಗಳನ್ನು ಸೃಜನಶೀಲತೆ ಭಿತ್ತಿಯಲ್ಲಿ ತೋರಿಸಲಾಗಿದೆ. ಹೀಗಾಗಿ ಹಿರಿಯ ವಿಮರ್ಶಕಿ ಆರ್.ಸುನಂದಮ್ಮ ಅವರನ್ನೊಳಗೊಂಡ ಆಯ್ಕೆ ಸಮಿತಿಯು ‘ದಾರಿ ತಪ್ಪಿಸುವ ಗಿಡ’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಟ್ರಸ್ಟ್‌ನ ಸದಸ್ಯರಾದ ರಾಜೇಂದ್ರಪ್ರಸಾದ್, ರಾಕೇಶ್ ಹಾಜರಿದ್ದರು.