ಸಾರಾಂಶ
ಮಳೆಯಿಂದಾಗಿ ಬೆಸ್ಕಾಂಗೆ 3.30 ಕೋಟಿ ರು. ನಷ್ಟವಾಗಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು : ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ 800ಕ್ಕೂ ಹೆಚ್ಚು ವಿದ್ಯುತ್ ಕಂಬ, 160ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳಿಗೆ ಹಾನಿ ಉಂಟಾಗುವ ಮೂಲಕ 3.30 ಕೋಟಿ ರು. ನಷ್ಟ ಉಂಟಾಗಿದೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತ ಕಳೆದ ಎರಡು ವಾರದಿಂದ ತೀವ್ರ ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರು ನಗರ ಸುತ್ತಮುತ್ತ 881 ವಿದ್ಯುತ್ ಕಂಬ ಹಾನಿಗೆ ಒಳಗಾಗಿದೆ. ಇದರಿಂದ 73.24 ಲಕ್ಷ ರು. ನಷ್ಟ ಉಂಟಾಗಿದ್ದು, ಸಿಡಿಲು ಮತ್ತಿತರ ಕಾರಣಗಳಿಗೆ 160 ವಿದ್ಯುತ್ ಪರಿವರ್ತಕ (ಟಿ.ಸಿ) ಹಾಳಾಗಿದೆ. ಇದರಿಂದ ಬರೋಬ್ಬರಿ 2.19 ಕೋಟಿ ರು. ನಷ್ಟ ಉಂಟಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಇದಲ್ಲದೆ ವಿದ್ಯುತ್ ಮಾರ್ಗ ಮತ್ತಿತರ ಹಾನಿಯಿಂದಾಗಿ 57.24 ಲಕ್ಷ ರು. ನಷ್ಟ ಉಂಟಾಗಿದೆ. ಒಟ್ಟಾರೆ ಕಳೆದ 13 ದಿನಗಳಿಂದ ಮಳೆಯಿಂದಾಗಿ 3.30 ಕೋಟಿ ರು. ನಷ್ಟು ಉಂಟಾಗಿರುವುದಾಗಿ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.