ವೇತನ ವಿಳಂಬಕ್ಕೆ ಬೆಸ್ಕಾಂ ಮೀಟರ್‌ ರೀಡರ್ಸ್‌ ಆಕ್ರೋಶ

| Published : Jan 24 2024, 02:04 AM IST

ಸಾರಾಂಶ

ವೇತನ ವಿಳಂಬಕ್ಕೆ ಬೆಸ್ಕಾಂ ಮೀಟರ್‌ ರೀಡರ್ಸ್‌ ಆಕ್ರೋಶ. ಏಕಾಏಕಿ 4-5 ಸಾವಿರ ರು. ವೇತನ ಕಡಿತ. ಮನವಿಗೆ ಸ್ಪಂದಿಸದ ಅಧಿಕಾರಿಗಳು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಬೆಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮೀಟರ್‌ ರೀಡರ್‌ಗಳು ವೇತನ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬುಧವಾರ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಮುತ್ತಿಗೆಗೆ ನಿರ್ಧಾರ ಮಾಡಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೂರಾರು ಮಂದಿ ಮೀಟರ್‌ ರೀಡರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ನವೆಂಬರ್‌ನಿಂದ ವೇತನ ಪಾವತಿಯಾಗಿಲ್ಲ. ಜತೆಗೆ ಹಿಂದೆ ನೀಡುತ್ತಿದ್ದ 21,291 ರು. ವೇತನದ ಬದಲಿಗೆ 17,385 ರು. ವೇತನ ನೀಡಲಾಗುತ್ತಿದೆ. ಏಕಾಏಕಿ 5 ಸಾವಿರ 4 ಸಾವಿರ ರು. ವೇತನ ಕಡಿತಗೊಳಿಸಲಾಗಿದೆ. ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಮೀಟರ್‌ ರೀಡರ್‌ಗಳು ದೂರಿದ್ದಾರೆ.

ವಿಳಂಬ ಬಗ್ಗೆ ಪರಿಶೀಲಿಸುತ್ತೇವೆ: ನಾಗರಾಜ್‌

ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಬೆಸ್ಕಾಂ ಗ್ರಾಹಕ ಸೇವೆಗಳ ಪ್ರಧಾನ ವ್ಯವಸ್ಥಾಪಕ ನಾಗರಾಜ್‌, ಬೆಸ್ಕಾಂನಲ್ಲಿ ಖಾಯಂ, ತಾತ್ಕಾಲಿಕ ನೇಮಕ ಹಾಗೂ ಹೊರಗುತ್ತಿಗೆ ಸೇರಿ ಮೂರು ಮಾದರಿಯಲ್ಲಿ ಮೀಟರ್‌ ರೀಡರ್‌ಗಳು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಯಾವ ಮೀಟರ್‌ ರೀಡರ್‌ಗಳ ವೇತನ ವಿಳಂಬ ಆಗಿದೆ ಎಂಬುದು ಪರಿಶೀಲನೆ ನಡೆಸುತ್ತೇವೆ. ಒಂದು ವೇಳೆ ವೇತನ ವಿಳಂಬ ಆಗಿದ್ದರೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.