ಸಮಾರಂಭದಲ್ಲಿ ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹಾಗೂ ಉಪಾಧ್ಯಕ್ಷ ಸಂತೋಷ ಎಸ್. ಪಂಡಿತ್ ಅವರು ಬ್ಯಾಂಕಿನ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶಿರಸಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 73ನೇ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿಗೆ ಠೇವಣಿ ಮತ್ತು ನಿವ್ವಳ ಲಾಭ ಅತಿ ಹೆಚ್ಚು ಹೊಂದಿರುವ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಹಾಗೂ ಇತರ ಮಹಾಮಂಡಳ ಮತ್ತು ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನಡೆದ 73ನೇ ಸಹಕಾರ ಸಪ್ತಾಹ ನಿಮಿತ್ತ ನಡೆದ ಸಮಾರಂಭದಲ್ಲಿ ಶಿರಸಿ ಅರ್ಬನ್ ಬ್ಯಾಂಕಿನ ಕಾರ್ಯಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಯಿತು.ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕ ಎಚ್.ಕೆ. ಪಾಟೀಲ, ಉಪಾಧ್ಯಕ್ಷ ಬಿ.ಎಸ್. ಪರಮಶಿವಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹಾಗೂ ಉಪಾಧ್ಯಕ್ಷ ಸಂತೋಷ ಎಸ್. ಪಂಡಿತ್ ಅವರು ಬ್ಯಾಂಕಿನ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಬ್ಯಾಂಕಿನ ನಿರ್ದೇಶಕರಾದ ಮಿಲಿಂದ ವಿ. ಪಂಡಿತ್ ಇದ್ದರು.25 ಶಾಖೆಗಳು: 121 ವರ್ಷಗಳ ಇತಿಹಾಸ ಹೊಂದಿರುವ ಶಿರಸಿ ಅರ್ಬನ್ ಬ್ಯಾಂಕಿನ ಒಟ್ಟೂ ಶಾಖೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿ ರಾಜ್ಯಾದ್ಯಂತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಪ್ರಸ್ತುತ ಹೊರ ರಾಜ್ಯಕ್ಕೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯು ಪ್ರಗತಿಯಲ್ಲಿದ್ದು, ಪ್ರಸ್ತುತ ಬ್ಯಾಂಕು ₹45.71 ಕೋಟಿ ಷೇರು ಬಂಡವಾಳ, ₹169.26 ಕೋಟಿ ಸ್ವಂತ ಬಂಡವಾಳ, ₹1568.30 ಕೋಟಿ ಠೇವಣಿಯನ್ನು ಹೊಂದಿದೆ. ₹1037.62 ಕೋಟಿ ಸಾಲ ಮತ್ತು ಮುಂಗಡಗಳನ್ನು ನೀಡಿ ಹೊಸ ದಾಖಲೆಯನ್ನು ನಿರ್ಮಿಸಿದೆ.ಬ್ಯಾಂಕು ಸತತವಾಗಿ ಲಾಭ ಗಳಿಸುತ್ತಿದ್ದು, ಕಳೆದ ಸಾಲಿನಲ್ಲಿ ₹13.59 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕು ₹2,500 ಕೋಟಿಗಿಂತ ಹೆಚ್ಚಿನ ವ್ಯವಹಾರ ಹೊಂದಿ ಬೆಳಗಾವಿ ವಿಭಾಗದ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲೇ ಪ್ರಥಮ ಸ್ಥಾನವನ್ನು ಹೊಂದಿದೆ.
ಬ್ಯಾಂಕಿನ ಸಾಧನೆಯನ್ನು ಗುರುತಿಸಿ, ಬೆಳಗಾವಿ ವಿಭಾಗದಿಂದ ಠೇವಣಿ ಮತ್ತು ನಿವ್ವಳ ಲಾಭ ಅತಿ ಹೆಚ್ಚು ಹೊಂದಿರುವ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ನೀಡಿರುವುದು ಬ್ಯಾಂಕಿನ ಸಾಧನೆಯ ಪ್ರತೀಕವಾಗಿದೆ ಹಾಗೂ ಬ್ಯಾಂಕಿನ ಈ ಎಲ್ಲ ಸಾಧನೆಗಳಿಗೆ ಸದಸ್ಯರು, ಗ್ರಾಹಕರ ಅಭೂತಪೂರ್ವ ವಿಶ್ವಾಸ, ನಿರಂತರ ಸಹಕಾರ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕರ್ತವ್ಯ ಕಾರಣವೆಂದು ಬ್ಯಾಂಕಿನ ಅಧ್ಯಕ್ಷ ಜಯದೇವ ಯು. ನಿಲೇಕಣಿ, ಉಪಾಧ್ಯಕ್ಷ ಸಂತೋಷ ಎಸ್. ಪಂಡಿತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.