ಸಾರಾಂಶ
ಕೊಡವ ಭಾಷೆಯ ನಾಡ ಪೆದ ಆಶಾ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಲಭಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
2021ನೇ ಸಾಲಿನ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕೊಡವ ಭಾಷೆಯ ‘ನಾಡ ಪೆದ ಆಶಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಲಭಿಸಿದೆ.ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ವಿಕೆ3 ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ‘ನಾಡ ಪೆದ ಆಶಾ’ವನ್ನು ನಿರ್ಮಿಸಿದ್ದು, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿದ್ದಾರೆ.ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಸೊಗಡನ್ನು ಸುಂದರವಾಗಿ ಬಿಂಬಿಸಲಾಗಿದೆ. ಕೊಡವ ಸಂಸ್ಕೃತಿ, ಉಡುಗೆ ತೊಡುಗೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಯುದ್ಧದಲ್ಲಿ ವೀರ ಯೋಧ ಪತಿಯನ್ನು ಕಳೆದುಕೊಳ್ಳುವ ಅಂಗನವಾಡಿ ಕಾರ್ಯಕರ್ತೆ ತನ್ನ ಬದುಕಿನ ಕಹಿ ಘಟನೆಯ ನಡುವೆಯೂ ಕರ್ತವ್ಯ, ಸಾಮಾಜಿಕ ಪ್ರಜ್ಞೆ, ಮನೆ ಮತ್ತು ಕುಟುಂಬವನ್ನು ಯಶಸ್ವಿಯಾಗಿ ನಿಭಾಯಿಸುವ ಕಥಾಹಂದರವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.2021 ರ ಫೆಬ್ರವರಿ ತಿಂಗಳಿನಲ್ಲಿ 15 ದಿನಗಳ ಕಾಲ ಹಗಲುರಾತ್ರಿ ಎನ್ನದೆ ಸುಮಾರು 35 ತಂತ್ರಜ್ಞರನ್ನೊಳಗೊಂಡ ಚಿತ್ರ ತಂಡ ಕೊಡಗಿನ ಮೂರ್ನಾಡು, ಬೇತ್ರಿ, ಬಲಮುರಿ, ಕಡಗದಾಳು, ಸೋಮವಾರಪೇಟೆ, ಕೋಟೆಬೆಟ್ಟ, ಮಡಿಕೇರಿ, ನಾಪೋಕ್ಲು, ಬೊಳಿಬಾಣೆ, ಮೊಕ್ಕೋಲಿ ರೆಸಾರ್ಟ್, ನೆಲ್ಲಿಮಾನಿ ರೆಸಾರ್ಟ್, ಬೇತ್ರಿ ಮುಕ್ಕಾಟಿರ ಐನ್ ಮನೆ ಸೇರಿದಂತೆ ವಿವಿಧ ಸ್ಥಳಗಳ ಪ್ರಕೃತಿಯ ಸೌಂದರ್ಯದಲ್ಲಿ ಚಿತ್ರೀಕರಣ ನಡೆಸಲಾಯಿತು.‘ನಾಡ ಪೆದ ಆಶಾ’ ಬಿಡುಗಡೆಯಾದ ನಂತರ ಕೊಡಗಿನ ಎಲ್ಲೆಡೆ ಎಲ್‌ಇಡಿ ಪರದೆಯ ಮೇಲೆ 123 ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆಯಿತು. ಅಲ್ಲದೆ ಹಲವು ಅಂತರ ರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿದೆ.