ಸಾರಾಂಶ
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಜನತಾ ಬಜಾರ್ ಹಾಗೂ ಗಣೇಶ ಪೇಟೆಯ ಮೀನು ಮಾರುಕಟ್ಟೆಯನ್ನು ಶೀಘ್ರದಲ್ಲಿಯೇ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿ:
ರಾಜ್ಯದಲ್ಲಿಯೇ ಅತ್ಯುತ್ತಮ ಹಾಗೂ ಮಾದರಿ ಬಡಾವಣೆ ನಿರ್ಮಿಸುವ ದೂರದೃಷ್ಟಿ ಇಟ್ಟುಕೊಳ್ಳಲಾಗಿತ್ತು. ಆ ನಿಟ್ಟಿನಲ್ಲಿ ಕೆಲಸ ನಡೆದಿವೆ. ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಲಾಗುವುದು ಎಂದು ಸ್ಲಂಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಇಲ್ಲಿನ ಮಂಟೂರು ರಸ್ತೆಯಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ 1300 ಮನೆಗಳನ್ನು ಶನಿವಾರ ವೀಕ್ಷಿಸಿದ ಬಳಿಕ ಮಾತನಾಡಿದರು.ಕೊಳಚೆ ಪ್ರದೇಶದಲ್ಲಿ ಹೆಚ್ಚಿನ ಜನರು ವಾಸಿಸುತ್ತಿರುವುದರಿಂದ ಅವರಿಗಾಗಿ ಉತ್ತಮ ವಸತಿ ಮನೆ ನಿರ್ಮಿಸಬೇಕೆಂಬ ಕನಸು ಹೊಂದಲಾಗಿತ್ತು. ಅದರ ಭಾಗವಾಗಿ ಜಿಲ್ಲೆಯಲ್ಲಿ 7,600 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿವೆ ಎಂದರು.
ಮಂಡಳಿಯಿಂದ ಮೊದಲ ಹಂತದಲ್ಲಿ 36,700 ಮನೆಗಳನ್ನು ಈಗಾಗಲೇ ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. 2ನೇ ಹಂತದಲ್ಲಿ ನಿರ್ಮಿಸುತ್ತಿರುವ 32,600 ಮನೆಗಳ ಉದ್ಘಾಟನೆಯನ್ನು ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ನೆರವೇರಿಸಲಿದ್ದಾರೆ. ಅದೇ ವೇಳೆ ಇಲ್ಲಿನ 1300 ಮನೆಗಳಲ್ಲಿ ಸುಮಾರು 550 ಮನೆ ಉದ್ಘಾಟಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.ಮುಂದಿನ ಹಂತದ ಮನೆಗಳನ್ನು ವೇಗವಾಗಿ ನಿರ್ಮಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಕೆಲವು ತಾಂತ್ರಿಕ ದೋಷ ಹಾಗೂ ಇತರೆ ತೊಂದರೆಗಳಿಂದ ಮನೆಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಅಬ್ಬಯ್ಯ ಹೇಳಿದರು.
ಈ ಜಾಗದಲ್ಲಿ 30 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರವನ್ನು 30 ಗುಂಟೆ ಜಾಗೆಯಲ್ಲಿ ನಿರ್ಮಿಸುವ ಯೋಚನೆ ಇದೆ. ಮಂಡಳಿಯಿಂದ ಪ್ರಸ್ತಾವನೆ ಸಿದ್ದಪಡಿಸಲು ತಿಳಿಸಲಾಗಿದೆ. ಸಮುದಾಯ ಭವನ, ಸಮುದಾಯ ಸಂಕೀರ್ಣ ಸ್ಥಾಪಿಸಲಾಗುತ್ತಿದೆ. ನಿರ್ಮಾಣಕ್ಕೆ ತಗುಲುವ ಅಂದಾಜು ವೆಚ್ಚದ ಬಗ್ಗೆ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಜನತಾ ಬಜಾರ್ ಹಾಗೂ ಗಣೇಶ ಪೇಟೆಯ ಮೀನು ಮಾರುಕಟ್ಟೆಯನ್ನು ಶೀಘ್ರದಲ್ಲಿಯೇ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಲಾಗುವುದು ಎಂದು ಶಾಸಕರು ಹೇಳಿದರು.
ಇದೇ ವೇಳೆ ರಾಜೀವಗಾಂಧಿ ವಸತಿ ಯೋಜನೆಯಡಿ 700 ಮನೆಗಳ ನಿರ್ಮಾಣ ಕಾಮಗಾರಿ ಸಹ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯ ಎಇಇ ಪ್ರವೀಣ, ಎಇ ಬಸವರಾಜ, ರಾಜು ಪಾಟೀಲ ಸೇರಿದಂತೆ ಇತರ ಅಧಿಕಾರಿಗಳಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))