ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನ; ವಿದ್ಯಾರ್ಥಿನಿಯರಿಗೆ ಶುಭಾಶಯ ಪತ್ರ ವಿತರಣೆ

| Published : Feb 28 2024, 02:33 AM IST

ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನ; ವಿದ್ಯಾರ್ಥಿನಿಯರಿಗೆ ಶುಭಾಶಯ ಪತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕೇವಲ ಜ್ಞಾನಾರ್ಜನೆ ಮಾತ್ರವಲ್ಲ, ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಶಿಕ್ಷಣ ವೈಯಕ್ತಿಕ ಬದುಕಿನ ಸೌಂದರ್ಯ ಹೆಚ್ಚಿಸುವ ಆಭರಣವಾಗಿದೆ. ತಂದೆ, ತಾಯಿಗಳು ಶಿಕ್ಷಣ ದೀಕ್ಷೆ ಕೊಡಿಸಿದ್ದಾರೆ. ಶಿಕ್ಷಕರು ಸಹ ಪಾಠ ಮಾಡುವ ಮೂಲಕ ಭವಿಷ್ಯ ಭವ್ಯವಾಗಲಿ ಎಂದು ಪ್ರಾರ್ಥಿಸುತ್ತಾರೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಲು ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪಿಯುಸಿ ನಂತರ ಮುಂದಿನ ಶಿಕ್ಷಣ ಮುಂದುವರಿಸುವ ಮೂಲಕ ತಮ್ಮ ಭವಿಷ್ಯ ಭವ್ಯವಾಗಿರಲೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಶುಭಾಶಯ ಪತ್ರ ನೀಡಲಾಯಿತು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್ ಶುಭಾಶಯ ಪತ್ರ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸೌಂದರ್ಯ ಹೆಚ್ಚಿಸುವ ಆಭರಣ ಶಿಕ್ಷಣ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಶಿಕ್ಷಣ ಕೇವಲ ಜ್ಞಾನಾರ್ಜನೆ ಮಾತ್ರವಲ್ಲ, ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಶಿಕ್ಷಣ ವೈಯಕ್ತಿಕ ಬದುಕಿನ ಸೌಂದರ್ಯ ಹೆಚ್ಚಿಸುವ ಆಭರಣವಾಗಿದೆ. ತಂದೆ, ತಾಯಿಗಳು ಶಿಕ್ಷಣ ದೀಕ್ಷೆ ಕೊಡಿಸಿದ್ದಾರೆ. ಶಿಕ್ಷಕರು ಸಹ ಪಾಠ ಮಾಡುವ ಮೂಲಕ ಭವಿಷ್ಯ ಭವ್ಯವಾಗಲಿ ಎಂದು ಪ್ರಾರ್ಥಿಸುತ್ತಾರೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಎಲ್ಲರೂ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ. ಇವೆಲ್ಲವನ್ನು ಸದ್ಬಳಕೆ ಮಾಡಿಕೊಂಡು ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಣ ಮುಂದುವರಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಉಪಸ್ಥಿತರಿದ್ದರು.