ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ

| Published : Nov 19 2024, 12:48 AM IST

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷದ ಆದಿಯ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.೧೮ರಿಂದ ೧೭ರ ತನಕ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ವರ್ಷದ ಆದಿಯ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.೧೮ರಿಂದ ೧೭ರ ತನಕ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಜಾತ್ರೋತ್ಸವದಲ್ಲಿ ಶನಿವಾರ ಬೆಳಗ್ಗೆ ಉತ್ಸವ ಬಲಿ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಮಂತ್ರಾಕ್ಷತೆಯಾಗಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ದೇವರ ಮಹಾಪೂಜೆ, ಶ್ರೀಜಟಾಧಾರಿ ದೈವದ ಭಂಡಾರ ತೆಗೆದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೧ರಿಂದ ಜಟಾಧಾರಿ ದೈವದ ಮಹಿಮೆ ನಡೆಯಿತು.ಕಟ್ಟೆಪೂಜೆ, ಬೆಟ್ಟಂಪಾಡಿ ಬೆಡಿ: ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ, ಭೂತಬಲಿ ನಡೆದು ವಸಂತಕಟ್ಟೆ ಪೂಜೆ ನೆರವೇರಿತು. ಬಳಿಕ ದೇವಳದಿಂದ ದೇವರ ಸವಾರಿ ಹೊರಟು ದಾರಿಯುದ್ದಕ್ಕೂ ಕಟ್ಟೆಪೂಜೆಯೊಂದಿಗೆ ಸಾಗಿ ದೇವರ ಮೂಲಸ್ಥಾನ ಬಿಲ್ವಗಿರಿ ಪ್ರವೇಶ ನಡೆದು ಅಲ್ಲಿ ಕಟ್ಟೆಪೂಜೆ ನಡೆಯಿತು. ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತು. ಬಿಲ್ವಗಿರಿಯಿಂದ ಹಿಂತಿರುಗಿದ ಬಳಿಕ ಕೆರೆ ಉತ್ಸವ ನಡೆಯಿತು. ಪುನಃ ದೇವಾಲಯದ ಒಳಗಾಗಿ ಮಂಗಳಾರತಿ ನಡೆಯಿತು. ಜಾತ್ರೋತ್ಸವದ ಕೊನೆಯ ದಿನವಾದ ಭಾನುವಾರ ಬೆಳಗ್ಗೆ ಕ್ಷೇತ್ರದ ಪರಿವಾರ ಸಾನ್ನಿಧ್ಯಗಳಾದ ಧೂಮಾವತಿ ದೈವದ ನೇಮ ಹಾಗೂ ಅಪರಾಹ್ನ ವ್ಯಾಘ್ರಚಾಮುಂಡಿ ಹುಲಿಭೂತ ನೇಮೋತ್ಸವದೊಂದಿಗೆ ಈ ವರ್ಷದ ಮೊದಲ ಜಾತ್ರೋತ್ಸವ ಸಂಪನ್ನಗೊಂಡಿತು.ಸಂಸದ, ಶಾಸಕರ ಭೇಟಿ:ಜಾತ್ರೋತ್ಸವದಲ್ಲಿ ನ.೧೫ರಂದು ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ನ.೬ರಂದು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ವಿವಿಧ ಜನ ಪ್ರತಿನಿಧಿಗಳು, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಊರ ಪರವೂರ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.