ಶ್ರೀಗಂಧ ಬೆಳೆಯಿಂದ ಉತ್ತಮ ಪರಿಸರ ನಿರ್ಮಾಣ: ಚುಂಚಶ್ರೀ

| Published : Aug 15 2024, 01:52 AM IST

ಶ್ರೀಗಂಧ ಬೆಳೆಯಿಂದ ಉತ್ತಮ ಪರಿಸರ ನಿರ್ಮಾಣ: ಚುಂಚಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಂಧ ಶುದ್ಧ ಪರಿಸರವನ್ನು ಹರಡುತ್ತದೆ, ಹಾಗೆಯೇ ಹಿಂದೂ ಸಂಪ್ರದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಆಚರಣೆಯಲ್ಲಿ ನಿತ್ಯ ಬಳಸುವ ವಸ್ತುವಾಗಿದೆ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಶ್ರೀಗಂಧ ಶುದ್ಧ ಪರಿಸರವನ್ನು ಹರಡುತ್ತದೆ, ಹಾಗೆಯೇ ಹಿಂದೂ ಸಂಪ್ರದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಆಚರಣೆಯಲ್ಲಿ ನಿತ್ಯ ಬಳಸುವ ವಸ್ತುವಾಗಿದೆ, ಹಾಗಾಗಿ ಮುಂದಿನ ದಿನಗಳಲ್ಲಿ ಶ್ರೀಗಂಧದ ಮರ ಬೆಳೆಸುವಲ್ಲಿ ರೈತಾಪಿ ಜನತೆ ಮುಂದಾಗುವಂತೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಶ್ರೀನಿವಾಸಪುರ- ಮದನಪಲ್ಲಿ ರಸ್ತೆಯ ಕೂಸಂದ್ರ ಕ್ರಾಸ್ ಬಳಿಯಿರುವ ಭುವನೇಶ್ವರಿ ನಿಸರ್ಗ ಆರ್ಗ್ಯಾನಿಕ್ ಸಂಸ್ಥೆ ಆವರಣದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಸಂಸ್ಥೆ, ಶ್ರೀ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ , ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ , ಅರಿಗ್ರಾಫ್ ಸಂಸ್ಥೆ ಸಹಯೋಗದಲ್ಲಿ ಶ್ರೀಗಂಧ ಸಸಿಗಳ ವಿತರಣೆ ಹಾಗೂ ಕೃಷಿಕರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಗಂಧಕ್ಕೆ ಮತ್ತು ಕರ್ನಾಟಕಕ್ಕೆ ಅವಿನಭಾವ ಸಂಬಂಧವಿದ್ದು, ನಮ್ಮ ನಾಡನ್ನು ಶ್ರೀಗಂಧದ ಬಿಡು ಎನ್ನುತ್ತಾರೆ. ಶ್ರೀಗಂಧದ ಮರಗಳನ್ನು ಬೆಳೆಸುವಲ್ಲಿ ಕಾನೂನಾತ್ಮಕ ಸಮಸ್ಯೆಗಳಿದ್ದು ಸರ್ಕಾರದ ಮಟ್ಟದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣರವರ ತಂಡ ನೀಡಿದ ಸಲಹೆ ಮೇರೆಗೆ ನಿಯಮಗಳನ್ನು ಬದಲಿಸಿ, ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಬದಲಾಯಿಸಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀಗಂಧದ ಮರಗಳನ್ನು ಸ್ಥಳೀಯವಾಗಿ ರೈತ ಉಪಕಸುಬಾಗಿ ಪರಿಗಣಿಸಿ ಬೆಳೆಯುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಶ್ರೀಗಂಧವನ್ನು ವಿವಿಧ ಔಷಧಗಳು ಮತ್ತ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ ಮಾತನಾಡಿ, ಜಾಗತಿಕ ತಾಪಮಾನ ಏರುತ್ತಿದ್ದು ಪರಿಸರದಲ್ಲಿ ಬಿಸಿಲಿನ ತಾಪಮಾನವನ್ನು ಸರಿದೂಗಿಸಲು ಶ್ರೀಗಂಧ ಮರ ಬೆಳೆಸುವಲ್ಲಿ ಕೈ ಜೊಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ನಾಡಪ್ರಭು ಕೆಂಪೇಗೌಡ ಸೇವಾಟ್ರಸ್ಟನ ಸಂಸ್ಥಾಪಕ ಅಧ್ಯಕ್ಷ ಬೆಲ್ಲಂ ಶ್ರೀನಿವಾಸರೆಡ್ಡಿ, ಅದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಪೀಠಾಧಿಪತಿ ಮಂಗಳಾನಂದನಾಥ ಸ್ವಾಮೀಜಿ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಉಪಾಧ್ಯಕ್ಷ ಶರಣಪ್ಪ, ಆರಿಗ್ರಾಫ್ ಸಂಸ್ಥೆ ಮುಖ್ಯಸ್ಥ ಸುಬ್ಬುಯೋಯಿಸ್, ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬಿಜಿಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ವೆಂಕಟರಾಮರೆಡ್ಡಿ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಅಧ್ಯಕ್ಷ ಟಿ.ಎಂ.ವೆಂಕಟೇಗೌಡ, ಕಾರ್ಯದರ್ಶಿ ಸುರೇಶ್,ಮುಖಂಡ ಕೊತ್ತೂರು ಅಮರನಾಥರೆಡ್ಡಿ ಮುಂತಾದವರು ಇದ್ದರು.