ಗುಣಾತ್ಮಕ ಶಿಕ್ಷಣದಿಂದ ಉತ್ತಮ ಭವಿಷ್ಯ: ಮಹೇಶ್‌ಗೌಡ

| Published : Feb 16 2024, 01:47 AM IST

ಗುಣಾತ್ಮಕ ಶಿಕ್ಷಣದಿಂದ ಉತ್ತಮ ಭವಿಷ್ಯ: ಮಹೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಕರು ಮಕ್ಕಳ ಬಗ್ಗೆ ಹಲವು ರೀತಿಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಉತ್ತಮ ಸಾಧನೆಗಳೊಂದಿಗೆ ಪಾಲಕರ ಕನಸುಗಳನ್ನು ನನಸಾಗಿಸಲು ಶ್ರಮಿಸಬೇಕು.

ಸಂಡೂರು: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಗುಣಮಟ್ಟದ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಪೊಲೀಸ್ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗದ ಆಶ್ರಯದಲ್ಲಿ ಗುರುವಾರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು. ಪಾಲಕರು ಮಕ್ಕಳ ಬಗ್ಗೆ ಹಲವು ರೀತಿಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಉತ್ತಮ ಸಾಧನೆಗಳೊಂದಿಗೆ ಪಾಲಕರ ಕನಸುಗಳನ್ನು ನನಸಾಗಿಸಲು ಶ್ರಮಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಮಾತನಾಡಿ, ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೆ ೧೨ ಘಟಕ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಗತಿಯನ್ನು ಪರಿಶೀಲಸಿ, ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಕಾರ್ಯಾಗಾರಗಳನ್ನು ಏರ್ಪಡಿಸಿ ಸಂಪನ್ಮೂಲ ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನವನ್ನು ಕೊಡಿಸಲಾಗುತ್ತಿದೆ ಎಂದರು. ಸಂಪನ್ಮೂಲ ಶಿಕ್ಷಕ ಪುರುಷೋತ್ತಮ್, ಹುಲುಗಪ್ಪ ಹಾಗೂ ಗದುಗಿನ ಸಿದ್ಧಲಿಂಗೇಶ್ವರ ಅವರು ಕ್ರಮವಾಗಿ ಗಣಿತ, ಇಂಗ್ಲಿಷ್, ಕನ್ನಡ ಹಾಗೂ ವಿಜ್ಞಾನ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಪಿ. ಚಂದ್ರಶೇಖರ್ ಕಪ್ಪಗಲ್ ಅವರು ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು. ಸಬ್ ಇನ್‌ಸ್ಪೆಕ್ಟರ್ ವೀರೇಶ್, ಶಿಕ್ಷಣ ಸಂಯೋಜಕ ಬಸವರಾಜ, ಸಿಆರ್‌ಪಿ ಮಂಜುಶ್ರೀ, ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಕೆ. ಕುಮಾರಸ್ವಾಮಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಂ. ಪುರುಷೋತ್ತಮ, ಮುಖ್ಯೋಪಾಧ್ಯಾಯರಾದ ಎಚ್.ಎನ್. ಭೋಸ್ಲೆ, ಕೊಟ್ರೇಶ್, ನೂರ್ ಮಹಮದ್, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.