ಸಾರಾಂಶ
ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗ್ರಾಮದ ಸುತ್ತಮುತ್ತ ನಡೆಯುವ ಅಕ್ರಮ ಜೂಜಾಟದ ಜಾಲಕ್ಕೆ ಯುವಕರು ಸಿಲುಕಿ ಹಣ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪೊಲೀಸರು ಎಚ್ಚೆತ್ತುಕೊಂಡಿದ್ದರೆ ದಂಧೆಯನ್ನು ತಡೆದಿದ್ದರೆ ತ್ಯಾಗರಾಜು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ.
ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್, ಜೂಜಾಟದ ಜಾಲಕ್ಕೆ ಸಿಲುಕಿದ್ದ ಯುವಕನೊಬ್ಬ ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳೇಬೂದನೂರು ಗ್ರಾಮದ ಬಳಿ ಜರುಗಿದೆ. ಗ್ರಾಮದ ತ್ಯಾಗರಾಜು (35) ಮೃತ ಯುವಕ. ಈತ ಗ್ರಾಮದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡು ನಂತರ ಹೋಟೆಲ್ ನಡೆಸಿಕೊಂಡಿದ್ದನು. ಆನಂತರದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜಾಟಕ್ಕೆ ಬಿದ್ದು ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದನು. ಹಲವಾರು ಜನರಿಂದ ಕೈ ಸಾಲ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿದ್ದನು ಎನ್ನಲಾಗಿದೆ. ಕೊನೆಗೆ ಸಾಲ ತೀರಿಸಲಾಗದೆ ಶುಕ್ರವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗ್ರಾಮದ ಸುತ್ತಮುತ್ತ ನಡೆಯುವ ಅಕ್ರಮ ಜೂಜಾಟದ ಜಾಲಕ್ಕೆ ಯುವಕರು ಸಿಲುಕಿ ಹಣ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪೊಲೀಸರು ಎಚ್ಚೆತ್ತುಕೊಂಡಿದ್ದರೆ ದಂಧೆಯನ್ನು ತಡೆದಿದ್ದರೆ ತ್ಯಾಗರಾಜು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಆತನ ಸಾವಿಗೆ ಪೊಲೀಸರೇ ಪರೋಕ್ಷ ಕಾರಣರು ಎಂದು ಆರೋಪಿಸಿದ್ದಾರೆ.ಸೋಮವಾರ ಪ್ರತಿಭಟನೆ:
ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಜೂಜಾಟ ತಡೆಯುವಂತೆ ಒತ್ತಾಯಿಸಿ ಕನ್ನಡಪರ, ಪ್ರಗತಿಪರ ಸಂಘಟನೆಗಳು ಸೋಮವಾರ (ನ.4)ದಂದು ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.