ಮಂಕಿಪಾಕ್ಸ್ ಪ್ರಕರಣ ಬಗ್ಗೆ ಮುಂಜಾಗೃತಿ ವಹಿಸಿ

| Published : Sep 02 2024, 02:13 AM IST

ಸಾರಾಂಶ

ರಾಜ್ಯ ಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮವಾಗಿ ಗುರುತಿಸಲು ಶ್ರಮ ವಹಿಸಬೇಕು.

ಬಳ್ಳಾರಿ: ಜಿಲ್ಲೆಯಲ್ಲಿ ಮಂಕಿಪಾಕ್ಸ್ ಪ್ರಕರಣ ಇಲ್ಲವಾದರೂ ಕೇರಳದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗೃತಿ ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ತಿಳಿಸಿದರು.ಜಿಪಂ ನಜೀರಸಾಬ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಭದ್ರ ಸಮಾಜ ನಿರ್ಮಾಣಕ್ಕೆ ತಳಪಾಯ ಹಾಕಲು ‘ಆರೋಗ್ಯ ಸಿಂಚನ’ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಆರೋಗ್ಯ ಜಾಗೃತಿಯ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಬೆರೆತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳ 713 ಶಾಲೆಗಳಲ್ಲಿ 7ರಿಂದ 10ನೇ ತರಗತಿಯ ಓದುತ್ತಿರುವ ಎಲ್ಲ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ಸಿದ್ಧಪಡಿಸಲಾದ ಈ ಕಾರ್ಯಕ್ರಮವನ್ನು ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಯಾವುದೇ ನ್ಯೂನತೆಗಳಿಲ್ಲದೇ ಪ್ರತಿ ವಿಡಿಯೋ ಪ್ರದರ್ಶಿಸಬೇಕು ಎಂದರು.ಬಳಿಕ ಮಕ್ಕಳೊಂದಿಗೆ ಸಂವಾದ ಕೈಗೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭಿಯಾನದ ರೀತಿಯಲ್ಲಿ ನಡೆಯುತ್ತಿರುವ ಆರೋಗ್ಯ ಸಿಂಚನ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮವಾಗಿ ಗುರುತಿಸಲು ಶ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯದ ವಿಷಯಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ತಿಳಿಸಿದಲ್ಲಿ ಮಾತ್ರ ತಮ್ಮ ಕುಟುಂಬದ ಸದಸ್ಯರಿಗೂ ಮಾಹಿತಿ ನೀಡುವ ಮೂಲಕ ಆರೋಗ್ಯಯುತ ಸಮಾಜ ಸೃಷ್ಟಿಸಬಹುದು ಎಂದರು.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 14 ದಿನಗಳ ಕಾಲ ತರಬೇತಿ ಪಡೆದ ಸಿಬ್ಬಂದಿಯಿಂದ ಕಂಪ್ಲಿ, ಸಿರುಗುಪ್ಪ ತಾಲೂಕುಗಳ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ತಯಾರಿಕೆ ಕುರಿತು ಮಾಹಿತಿ ನೀಡಿ ಕೇಂದ್ರಗಳನ್ನು ಬಲಪಡಿಸುವ ಮೂಲಕ ಹೆಚ್ಚು ಮಕ್ಕಳನ್ನು ದಾಖಲಿಸಲು ಕ್ರಮ ವಹಿಸಿ ಎಂದು ಸೂಚಿಸಿದರು.

ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ನೋ-ಸ್ಕಾಲ್‌ಪೆಲ್ ವ್ಯಾಸೆಕ್ಟುಮಿ ವಿಧಾನವನ್ನು ಹೆಚ್ಚು ಜನಪ್ರಿಯಗೊಳಿಸಲು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಟ್ಟ ಮಕ್ಕಳನ್ನು ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಡಿಇಐಸಿ ಕೇಂದ್ರಕ್ಕೆ ಕಳುಹಿಸಿ ಶಸ್ತ್ರಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಜಿಪಂ ಸಿಇಒ ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶಬಾಬು ಮಾತನಾಡಿ, ಡೆಂಘೀ ನಿಯಂತ್ರಣಕ್ಕಾಗಿ ತಂಡಗಳನ್ನು ರಚಿಸಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಹೆರಿಗೆ ನಿರ್ವಹಣೆಗೆ ಹಾಗೂ ಎಲ್ಲ ಲಸಿಕೆಗಳನ್ನು ಮಕ್ಕಳಿಗೆ ಹಾಕಿಸಲು ಕ್ರಮ ವಹಿಸಲಾಗುತ್ತಿದೆ. ಎಚ್‌ಐವಿ ಕುರಿತು ಸಾರ್ವತ್ರಿಕವಾಗಿ ಪ್ರಚಾರ ನೀಡಲು ಕಾಲೇಜು ವಿದ್ಯಾರ್ಥಿಗಳ ಮೂಲಕ ಪ್ಲಾಶ್ ಮಾಬ್, ಕಬಡ್ಡಿ ಕ್ರೀಡೆ ಆಯೋಜಿಸಲಾಗುತ್ತಿದೆ ಮತ್ತು ಮಾನಸಿಕ ರೋಗಗಳ ಜಾಗೃತಿಗಾಗಿ 14416 ಉಚಿತ ಸಹಾಯವಾಣಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಪಶು ಸಂಗೋಪನಾ ಇಲಾಖೆಯ ಡಾ.ರಾಜಶೇಖರ್ ನಾಗೂರ್, ಐಎಂಎ ಅಧ್ಯಕ್ಷ ಡಾ.ಶ್ರೀನಿವಾಸುಲು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಗಿರೀಶ್, ವೆಂಕೋಬ ನಾಯ್ಕ ಸೇರಿದಂತೆ ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.