ಬೆಂ-ಮೈ ಹೆದ್ದಾರೀಲಿ ಸಂಚರಿಸುವ ಚಾಲಕರೇ ಎಚ್ಚರ!

| Published : May 18 2024, 12:31 AM IST

ಸಾರಾಂಶ

ರಾಮನಗರ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಳವಡಿಸಿರುವ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ ಪಿಆರ್) ಕ್ಯಾಮೆರಾ ಕಾರ್ಯಾರಂಭ ಮಾಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರೇ ಎಚ್ಚರವಾಗಿರಿ

ರಾಮನಗರ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಳವಡಿಸಿರುವ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ ಪಿಆರ್) ಕ್ಯಾಮೆರಾ ಕಾರ್ಯಾರಂಭ ಮಾಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರೇ ಎಚ್ಚರವಾಗಿರಿ.

ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತದಿಂದ ಉಂಟಾಗುವ ಸಾವು-ನೋವು ಕಡಿಮೆ ಮಾಡಲು ಹಾಗೂ ಮಿತಿ ಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾ ನಿಗಾ ಇಟ್ಟಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ಮನೆಗೆ ನೋಟಿಸ್ ರವಾನಿಸುತ್ತಿದೆ.

ಮೇ 1ರಿಂದ ಮೇ 16ವರೆಗೆ ಒಟ್ಟು 12,192 ಕೇಸ್‌ಗಳು ದಾಖಲಾಗಿದೆ. ಹೆದ್ದಾರಿಯಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳ ಆಧಾರದ ಮೇಲೆ ಕೇಸ್ ಮಾಡಲಾಗಿದೆ.

ಅತಿಯಾದ ವೇಗ, ಚಾಲಕರು ಚಾಲಕ ಸೀಟ್ ಬೆಲ್ಟ್ ಧರಿಸದೇ ಇರುವುದು ಹಾಗೂ ಪಕ್ಕದಲ್ಲಿ ಕುಳಿತುಕೊಂಡಿರೋ ವ್ಯಕ್ತಿ ಸೀಟ್ ಬೆಲ್ಟ್ ಧರಿಸದೇ ಇರುವುದು ಈ ಎಲ್ಲಾ ಸಂಚಾರ ನಿಯಮ ಉಲ್ಲಂಘನೆ ಮೇಲೆ ಪೊಲೀಸರು ಸಂಬಂಧಪಟ್ಟ ಮಾಲೀಕನ ವಿಳಾಸಕ್ಕೆ ನೋಟಿಸ್ ಕಳುಹಿಸಿದ್ದಾರೆ.

ಸಂಚಾರ ಪೊಲೀಸರು ಕಳುಹಿಸಿದ ನೋಟಿಸ್ ತಲುಪಿದ 7 ದಿನದಲ್ಲಿ ಸಂಬಂಧಪಟ್ಟ ಸಂಚಾರ ಠಾಣೆಗೆ ಹೋಗಿ ದಂಡ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ದಂಡ ಕಟ್ಟದೇ ಮೊಂಡಾಟ ಮಾಡಿದರೆ 6 ತಿಂಗಳು ಜೈಲು ಅಥವಾ 5,000 ರುಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನು ನೋಟಿಸ್‌ನಲ್ಲಿ ನೀಡಲಾಗಿದೆ.

ಅಪಘಾತಗಳ ಸಂಖ್ಯೆ ಇಳಿಕೆ:

ಎಕ್ಸ್‌ಪ್ರೆಸ್‌ವೇನಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ. ನಿಗದಿ ಪಡಿಸಲಾಗಿದೆ. ವೇಗ ಮಿತಿ ದಾಟಿದರೆ 1000 ರು. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ಕಠಿಣ ಕ್ರಮದಿಂದಾಗಿ ಈಗ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಭಾರೀ ಇಳಿಕೆಯಾಗಿದೆ.

ಬಾಕ್ಸ್ ..........

ಏನಿದು ತಂತ್ರಜ್ಞಾನ?

ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಮೊರೆ ಹೊಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition – ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.

ಬಾಕ್ಸ್ ............

ಪ್ರಕರಣ ದಾಖಲು ಎಕ್ಸ್ ನ ಖಾತೆಯಲ್ಲಿ ಹಂಚಿಕೆ

ಕರ್ನಾಟಕ ರಾಜ್ಯ ಪೊಲೀಸ್ ಸಾಮಾಜಿಕ ಜಾಲತಾಣ ಎಕ್ಸ್ ನ ತನ್ನ ಖಾತೆಯಲ್ಲಿ ಬೆಂಗಳೂರು - ಮೈಸೂರು ಹೈವೇಯಲ್ಲಿ 15 ದಿನಗಳಲ್ಲಿ 12,192 ಪ್ರಕರಣ ದಾಖಲಿಸಿರುವ ಕುರಿತು ಪೋಸ್ಟ್ ಮಾಡಿದೆ.

ಆ ಪೋಸ್ಟ್ ನಲ್ಲಿ ಬೆಂಗಳೂರು - ಮೈಸೂರು ಹೈವೇನಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ಕೆಲಸ ಮಾಡುತ್ತಿವೆ. ಕೇವಲ 15 ದಿನಗಳಲ್ಲಿ 1,192 ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ. ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತವಾದರೆ ಅದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ... ಒಮ್ಮೆ ಯೋಚಿಸಿ. ಯಾವಾಗಲೂ ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿ ಚಲಿಸಿ...ಎಂದು ತಿಳಿಸಿದೆ.

ಬಾಕ್ಸ್‌............

ಮೊಬೈಲಲ್ಲಿ ಮಾತಾಡಿಕೊಂಡು ಚಾಲನೆ ಮಾಡಿದರೆ ಕ್ರಮ

ರಾಮನಗರ: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಮೊಬೈಲ್‌ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆಗ್ರಹಿಸಿದ್ದಾರೆ.

ಚಾಲಕನ ಅಜಾಗರೂಕ ಹಾಗೂ ಅಶಿಸ್ತಿನ ನಡವಳಿಕೆ ಕುರಿತು ಅಲೋಕ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ನಮ್ಮ ಎಲ್ಲ ಸಿಸಿಟಿವಿಗಳು ಅವುಗಳ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಮೇ 11 ರಂದು ಚನ್ನಪಟ್ಟಣ ಬಳಿ ಕೆಎಸ್‌ಆರ್‌ಟಿಸಿ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಾರೆ ಎಂದು ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

ಹೈವೇನಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ. ಕೇವಲ 15 ದಿನದಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ. ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತವಾದರೆ ಅದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ? ಒಮ್ಮೆ ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಬಸ್‌ನ ವಿವರ ಹಾಗೂ ದಂಡದ (ರು.1,500) ವಿವರಗಳನ್ನು ಅಲೋಕ್ ಕುಮಾರ್ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕಾರಿನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವ ಇತರ ಕೆಲವರ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ಈ ಮೂಲಕ ಯಾವುದೇ ಸಂಚಾರ ಉಲ್ಲಂಘನೆಗಳನ್ನೂ ನಾವು ಸಹಿಸುವುದಿಲ್ಲ ಎಂದು ಅವರು ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಲೋಕ್ ಕುಮಾರ್ ಅವರ ಈ ಆಗ್ರಹಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಸಲಹೆಗಾಗಿ ಧನ್ಯವಾದಗಳು ಸರ್, ನಿಯಮ ಉಲ್ಲಂಘಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಡಿಪೋ ಮತ್ತು ವಿಭಾಗಕ್ಕೆ ಸೂಚಿಸಲಾಗಿದೆ ಎಂದು ಹೇಳಿಕೊಂಡಿದೆ.17ಕೆಆರ್ ಎಂಎನ್ 1,2,3,4,5.ಜೆಪಿಜಿ

1.ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಳವಡಿಸಿರುವ AI ಆಧಾರಿತ ANPR ಕ್ಯಾಮೆರಾ

2,3,4,5.- ಸಂಚಾರ ನಿಯಮ ಉಲ್ಲಂಘಿಸಿರುವ ವಾಹನಗಳು.