ಸಾರಾಂಶ
ಪಟ್ಟಣದ ೧೫ ವಾರ್ಡಿಗಳಲ್ಲಿ ಯಾರಿಗೂ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಜತೆಗೆ ನೀರಿನ ಸಮಸ್ಯೆಗಳ ಕುರಿತು ದೂರು ಬಂದಲ್ಲಿ ಆಯಾ ವಾರ್ಡಿನ ನೀರಗಂಟಿಗಳೇ ಹೊಣೆಗಾರರು.
ಯಲಬುರ್ಗಾ: ಬೇಸಿಗೆ ಆರಂಭವಾಗುವ ಸಮಯದಲ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪಪಂನಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಹಾಗೂ ಪಪಂ ಆಡಳಿತಾಧಿಕಾರಿ ಬಸವರಾಜ ತೆನ್ನಳ್ಳಿ ಹೇಳಿದರು.
ಸ್ಥಳೀಯ ಪಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕುಡಿಯುವ ನೀರು ಹಾಗೂ ತೆರಿಗೆ, ಸ್ವಚ್ಛತಾಕಾರ್ಯ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲ ಸಿಬ್ಬಂದಿ ಜಾಗ್ರತ ಆಗಿರಬೇಕು. ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.ಪಟ್ಟಣದ ೧೫ ವಾರ್ಡಿಗಳಲ್ಲಿ ಯಾರಿಗೂ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಜತೆಗೆ ನೀರಿನ ಸಮಸ್ಯೆಗಳ ಕುರಿತು ದೂರು ಬಂದಲ್ಲಿ ಆಯಾ ವಾರ್ಡಿನ ನೀರಗಂಟಿಗಳೇ ಹೊಣೆಗಾರರು. ಆದ್ದರಿಂದ ಎಲ್ಲ ಸಿಬ್ಬಂದಿ ಅತ್ಯಂತ ಪರಿಶ್ರಮ ಹಾಗೂ ಕಾಳಜಿಯಿಂದ ಕೆಲಸ ನಿರ್ವಹಿಸಬೇಕು. ಸರ್ಕಾರದಿಂದ ನೀರಿಗಾಗಿ ಪ್ರತ್ಯೇಕ ಹಣ ಮೀಸಲಿಡಲಾಗಿದೆ. ಸಮಸ್ಯಾತ್ಮಕ ವಾರ್ಡ್‌ಗಳು ಇದ್ದರೆ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ನಮ್ಮ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಅವಶ್ಯಕತೆ ಇದ್ದರೆ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲು ಎಲ್ಲರೂ ಸಿದ್ಧರಾಗಿರಬೇಕು ಹಾಗೂ ಕರ ವಸೂಲಿಯನ್ನು ಹೆಚ್ಚಿಗೆ ಮಾಡಬೇಕು. ಅದರಲ್ಲಿ ಬರುವ ಹಣವನ್ನು ಇನ್ನೂ ಹೆಚ್ಚಿನ ಬೇರೆ ಬೇರೆ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.ಪಪಂ ಶಿರಸ್ತೇದಾರ್ ಕನಕಪ್ಪ, ಸಿಬ್ಬಂದಿ ಸುಮಾ, ಯಂಕಣ್ಣ ಜೋಷಿ, ರಮೇಶ ಬೇಲೇರಿ, ಶಿವಕುಮಾರ ಸರಗಣಾಚಾರ. ಚನ್ನಯ್ಯ ಸಂಕಿನಮಠ, ನಾರಾಯಣ ಗಂಗಾಖೇಡ, ಸುಭಾಸ್ ಭಾವಿಮನಿ, ರವಿ ಯಕ್ಲಾಸಪುರ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))