ಭಯ ಹುಟ್ಟಿಸಿ ಹಣಕ್ಕೆ ಬೇಡಿಕೆ ಇಡ್ತಾರೆ ಹುಷಾರ್‌!

| Published : Jan 31 2024, 02:15 AM IST

ಸಾರಾಂಶ

ಭಯ ಹುಟ್ಟಿಸಿ ಹಣಕ್ಕೆ ಬೇಡಿಕೆ ಇಡ್ತಾರೆ ಹುಷಾರ್‌!

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

ಜನರು ದುಡ್ಡು ಮಾಡಲು ಇದೀಗ ಅನ್ಯ ಮಾರ್ಗಗಳ ಮೊರೆ ಹೋಗುತ್ತಿರುವ ಕಳವಳಕಾರಿ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವುಗಳಲ್ಲಿ ಸೈಬರ್‌ ಕ್ರೈಂ ಸೇರಿದಂತೆ ಇತರೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸೇರಿದಂತೆ ಜನರಿಗೆ ಹತ್ತಿರವಾಗಿರುವ ಎಲ್ಲ ಮಾಧ್ಯಮಗಳ ಮೂಲಕ ಜಾಗೃತೆಯಿಂದ ಇರುವಂತೆ ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ. ಇದರ ಹೊರತಾಗಿಯೂ ಮೋಸ ಮಾಡುವವರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಸಿಬಿಐ, ಕಸ್ಟಮ್‌ ಅಧಿಕಾರಿಗಳ ಹೆಸರಲ್ಲಿ ಹಣ ಪೀಕುವ ಗ್ಯಾಂಗ್ ಕೂಡ ಸಕ್ರಿಯವಾಗಿದ್ದು, ಇದು ಜನರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.

ಇತ್ತೀಚಿಗೆ ಮೊಬೈಲ್‌ ನೆಟ್‌ವರ್ಕ್‌ 4ಜಿಯಿಂದ 5ಜಿಗೆ ಅಪಡೇಟ್‌, ಉಡುಗೊರೆ, ಹಣ ಡಬ್ಲಿಂಗ್‌ ಮಾಡುವ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣಗಳ ಬೆನ್ನಲ್ಲೇ ಸಿಬಿಐ, ಕಸ್ಟಮ್‌ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿರುವು ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ನಾಲ್ಕೈದು ಜನ ಉದ್ಯಮಿ, ರಿಯಲ್‌ ಎಸ್ಟೇಟ್‌ ಸೇರಿದಂತೆ ಸ್ಥಿತಿವಂತರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿರುವ ಸಿಬಿಐ ಅಧಿಕಾರಿಗಳು ಎಂದು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಗಳು ಬೆಳಕಿಗೆ ಬಂದಿವೆ.

ಭಯ ಹುಟ್ಟಿಸಿ ಹಣಕ್ಕೆ ಬೇಡಿಕೆ:

ಮೊಬೈಲ್‌ ನಂಬರ್‌ ಕಲೆ ಹಾಕುವ ವಂಚಕರ ಗ್ಯಾಂಗ್‌ ಕರೆ ಮಾಡಿ ನಾವು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸಿಬಿಐ ಹಾಗೂ ಕಸ್ಟಮಮ್ಸ್‌ ಅಧಿಕಾರಿಗಳು ಎಂದು ಮಾತು ಆರಂಭಿಸುತ್ತಾರೆ. ಬಳಿಕ ನಿಮ್ಮ ಹೆಸರಲ್ಲಿ ಒಂದು ಪಾರ್ಸಲ್‌ ಬಂದಿದ್ದು, ಅದು ಅನುಮಾನ ಹುಟ್ಟಿಸಿದ್ದರಿಂದ ತೆರೆದು ನೋಡಲಾಗಿದೆ. ಅದರಲ್ಲಿ ಡ್ರಗ್ಸ್‌ ಸೇರಿದಂತೆ ಮಾದಕ ವಸ್ತುಗಳು ಪತ್ತೆಯಾಗಿವೆ. ಆದ್ದರಿಂದ ತಾವು ದೆಹಲಿಗೆ ಬರಬೇಕು ಎಂದು ಹೇಳಿ ಸಂಪೂರ್ಣ ವಿಳಾಸ ಸೇರಿದಂತೆ ಇನ್ನಿತರೆ ಮಾಹಿತಿ ಕಲೆ ಹಾಕುತ್ತಾರೆ. ಕೆಲ ಸಮಯದ ಬಳಿಕ ಮತ್ತೆ ಕರೆ ಮಾಡಿ ಹಿರಿಯ ಅಧಿಕಾರಿಗಳು ಮಾತನಾಡುತ್ತಾರೆ ಎಂದು ಹೇಳಿ ಮಾತು ಆರಂಭಿಸಿ ಭಯಪಡುವ ರೀತಿಯಲ್ಲಿ ಮಾತನಾಡಿ, ಬಳಿಕ ನಾವೇ ಬಗೆಹರಿಸುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪೊಲೀಸರಿಗೆ ಮಾಹಿತಿ:

ದೂರದ ದೆಹಲಿಗೆ ಹೋಗವುದು ಮತ್ತು ಸಿಬಿಐ, ಕಸ್ಟಮ್‌ ಅಧಿಕಾರಿಗಳ ಕೈಗೆ ಸಿಕ್ಕು ಕಂಗೆಡುವ ಬದಲಿಗೆ ಬಗೆಹರಿದರೆ ಸಾಕು ಎಂದುಕೊಂಡು ಹಣ ನೀಡಲು ಒಪ್ಪಿಕೊಳ್ಳುತ್ತಿದ್ದಂತೆ, ಲಕ್ಷಗಟ್ಟಲೇ ಹಣಕ್ಕೆ ಬೇಡಿಕೆ ಇಡುತ್ತಿರುವ ಗ್ಯಾಂಗ್‌ ಸಕ್ರಿಯವಾಗಿದೆ. ಇಂತಹ ಕರೆಗಳು ಬರುತ್ತಿದ್ದಂತೆ ಬೆಳಗಾವಿ ನಗರದ ಜನರು ಸಿಇಎನ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ಪೊಲೀಸ್‌ ಅಧಿಕಾರಿ ಯಾವುದೇ ಕಾರಣಕ್ಕೂ ಹಣ ಹಾಕಬೇಡಿ ಮತ್ತು ಭಯಭೀತರಾಗಬೇಡಿ. ಇದೊಂದು ವಂಚಕರ ಗ್ಯಾಂಗ್‌ನ ಕರೆಯಾಗಿದೆ ಎಂದು ಧೈರ್ಯ ತುಂಬಿದ್ದರಿಂದ ಹಣ ಕಳೆದುಕೊಂಡಿಲ್ಲ. ಆದ್ದರಿಂದ ಇಂತಹ ವಂಚಕರ ಕರೆ ಬರುತ್ತಿದ್ದಂತೆ ಸಮೀಪದ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತಿಳಿಸಿದಲ್ಲಿ ಅಗತ್ಯ ಸಹಕಾರ ಸಿಗಲಿದೆ ಎಂದು ಪೊಲೀಸ್‌ ಅಧಿಕಾರಿಗಳು ಧೈರ್ಯಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೆ ಇರುತ್ತಾರೆ. ಹೀಗಾಗಿ ಯಾವುದೇ ಅನ್ಯ ಕರೆಗಳು ಬಂದರೆ ಭಯ ಪಡದೇ ಅವುಗಳ ಪೂರ್ವಾಪರ ವಿಚಾರ ಮಾಡಿ ಹೆಜ್ಜೆ ಇಡುವುದು ಉತ್ತಮ. ಇಲ್ಲವಾದಲ್ಲಿ ನೀವು ಮೋಸ ಹೋಗುವುದು ಖಚಿತ. ಇಂತಹ ವಂಚಕ ಗ್ಯಾಂಗ್‌ಗಳ ಬಗ್ಗೆ ಜಾಗೃತಿ ಕೂಡಾ ಇಂದಿನ ಅಗತ್ಯವಾಗಿದೆ.

-----------

ಕೋಟ್‌

ದೆಹಲಿ ವಿಮಾನ ನಿಲ್ದಾಣದಲ್ಲಿರುವ ಸಿಬಿಐ ಅಧಿಕಾರಿಗಳು ಎಂದು ಹೇಳಿ, ತಮ್ಮ ಹೆಸರಿನಲ್ಲಿರುವ ಪಾರ್ಸಲ್‌ನಲ್ಲಿ ಡ್ರಗ್ಸ್‌ ಸೇರಿದಂತೆ ಮಾದಕ ವಸ್ತು ಇದೆ ಎಂದು ಹೇಳಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಕರೆ ಸ್ವೀಕರಿಸಿದ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ ಸಮಯದಲ್ಲಿ ಹಣ ಹಾಕಬೇಡಿ ಮತ್ತು ಭಯಭೀತರಾಗದಂತೆ ತಿಳಿಸಲಾಗಿದೆ. ಇಂತಹ ಕರೆ ಬಂದರೆ ಪೊಲೀಸರ ಗಮನಕ್ಕೆ ತನ್ನಿ.

-ಬಿ.ಆರ್.ಗಡ್ಡೇಕರ, ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿಇಎನ್‌ ಪೊಲೀಸ್‌ ಠಾಣೆ ಬೆಳಗಾವಿ