ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸಿ.ಟಿ.ರವಿ ಒಬ್ಬ ಅಯೋಗ್ಯ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಆಕ್ರೋಶದಿಂದ ನುಡಿದರು.ಕೆರಗೋಡಿನಲ್ಲಿ ಹನುಮಧ್ವಜವನ್ನು ಕೆಳಗಿಳಿಸಿ ತಾಲಿಬಾನ್ ಧ್ವಜ ಹಾರಿಸಿದ್ದಾರೆ ಎಂದಿರುವುದು ದೇಶದ್ರೋಹದ ಹೇಳಿಕೆಯಾಗಿದೆ. ಭಾರತೀಯರಾದ ನಾವು ಇದನ್ನು ಉಗ್ರವಾಗಿ ಖಂಡಿಸಬೇಕು. ಇಂತಹವರು ನೀಡುವ ಪ್ರಚೋದನೆಗಳಿಗೆ ಯಾರೂ ಒಳಗಾಗಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಿ.ಟಿ.ರವಿ ನನ್ನ ಸ್ನೇಹಿತರೂ ಆಗಿದ್ದಾರೆ. ಆದರೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಾಗ ಅದನ್ನು ಸಹಿಸುವುದಿಲ್ಲ. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿರುವುದಕ್ಕೆ ಸಿ.ಟಿ.ರವಿ ಕ್ಷಮೆಯಾಚಿಸಬೇಕು. ಆನಂತರ ನನ್ನ ಮಾತಿನಲ್ಲಿ ತಪ್ಪಿದ್ದರೆ ವಾಪಸ್ ಪಡೆಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿ.ಟಿ.ರವಿ ವಿರುದ್ಧ ಎಸ್‌ಪಿಗೆ ದೂರುರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಂಗಳವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದರು.ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹಾರಿಸಿರುವ ರಾಷ್ಟ್ರಧ್ವಜವನ್ನು ಸಿ.ಟಿ.ರವಿ ಅವರು ತಾಲಿಬಾನ್ ಧ್ವಜ ಎಂದು ನಿಂದಿಸಿದ್ದಾರೆ. ಇದು ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಆ ಹಿನ್ನೆಲೆಯಲ್ಲಿ ಆರ್ಟಿಕಲ್ ೫೧ಎ (ಎ) ಪ್ರಕಾರ ದೂರು ದಾಖಲಿಸಿದ್ದು, ಸಿ.ಟಿ.ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.