ಇಂದು ಶಂಕಿತ ನಕ್ಸಲ್ ಕೃಷ್ಣಮೂರ್ತಿ ಕೋರ್ಟ್‌ಗೆ?

| Published : Jan 31 2024, 02:15 AM IST

ಸಾರಾಂಶ

ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕುಖ್ಯಾತ ಶಂಕಿತ ನಕ್ಸಲ್ ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಈಗಾಗಲೇ ಕೇರಳ ಜೈಲಿನಲ್ಲಿ ಇರುವ ನಕ್ಸಲ್ ಕೃಷ್ಣಮೂರ್ತಿಯನ್ನು ಬಾಡಿ ವಾರೆಂಟ್ ಮೇಲೆ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ಶಿವಮೊಗ್ಗದತ್ತ ಕರೆ ತರುತ್ತಿದ್ದಾರೆ. ರಾತ್ರಿ ಶಿವಮೊಗ್ಗ ತಲುಪುವ ಸಾಧ್ಯತೆ ಇದ್ದು, ರಾತ್ರಿಯೇ ಎಲ್ಲ ಪ್ರಕ್ರಿಯೆ ಮುಗಿಸಿ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಶಿವಮೊಗ್ಗ ಪೊಲೀಸರು

- 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯ, ಕಾನೂನು ವಿರೋಧಿ ಕೃತ್ಯ ಆರೋಪ

- 2021ರ ಡಿಸೆಂಬರ್ ತಿಂಗಳಲ್ಲಿ ಕೇರಳ ಪೊಲೀಸರಿಗೆ ಸೆರೆಯಾಗಿದ್ದ ಕೃಷ್ಣಮೂರ್ತಿ

- ಈಗಾಗಲೇ ಉಡುಪಿ, ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ

- ಎಲ್ಎಲ್‌ಬಿ ಓದಿರುವ ಈತ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ವಾದ ಮಂಡಿಸುತ್ತಿರೋದು ವಿಶೇಷ

- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕುಖ್ಯಾತ ಶಂಕಿತ ನಕ್ಸಲ್ ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಈಗಾಗಲೇ ಕೇರಳ ಜೈಲಿನಲ್ಲಿ ಇರುವ ನಕ್ಸಲ್ ಕೃಷ್ಣಮೂರ್ತಿಯನ್ನು ಬಾಡಿ ವಾರೆಂಟ್ ಮೇಲೆ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ಶಿವಮೊಗ್ಗದತ್ತ ಕರೆ ತರುತ್ತಿದ್ದಾರೆ. ರಾತ್ರಿ ಶಿವಮೊಗ್ಗ ತಲುಪುವ ಸಾಧ್ಯತೆ ಇದ್ದು, ರಾತ್ರಿಯೇ ಎಲ್ಲ ಪ್ರಕ್ರಿಯೆ ಮುಗಿಸಿ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ತೀರ್ಥಹಳ್ಳಿ ಪೊಲೀಸರ ತಂಡವೊಂದು ಕೇರಳದ ಕಾರಾಗೃಹದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಬಾಡಿ ವಾರಂಟ್ ಮೇಲೆ ಕರೆದುಕೊಂಡು ಬರಲು ಸೋಮವಾರವೇ ಎಎನ್ಎಫ್ ಟೀಂ ಜೊತೆಗೆ ಕೇರಳಕ್ಕೆ ತೆರಳಿತ್ತು.

ಕಳೆದ 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮತ್ತು ಕಾನೂನು ವಿರೋಧಿ ಕೃತ್ಯದಲ್ಲಿ ತೊಡಗಿದ್ದ ಎನ್ನುವ ಆರೋಪ ಹೊತ್ತಿದ್ದ ಈತನ ಮೇಲೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಕಣ್ಣಿಟ್ಟಿದ್ದರು. 2021ರ ಡಿಸೆಂಬರ್ ತಿಂಗಳಲ್ಲಿ ಕೇರಳ ಪೊಲೀಸರಿಗೆ ಈತ ಸೆರೆಯಾಗಿದ್ದ.

ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗದಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿ.ಜಿ.ಕೆ.ಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ಹಾಜರುಪಡಿಸುತ್ತಿದ್ದಾರೆ. ವಿಶೇಷವೆಂದರೆ, ಎಲ್ಎಲ್‌ಬಿ ಓದಿರುವ ಬಿಜಿಕೆ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ತಲ್ಲೂರು ಅಂಗಡಿ ಬಳಿ ಬಸ್ ಸುಟ್ಟ ಪ್ರಕರಣ ಹಾಗೂ ತೀರ್ಥಹಳ್ಳಿಯಲ್ಲಿ ಇನ್ನೊಂದು ಪ್ರಕರಣದಲ್ಲಿ ಕೃಷ್ಣಮೂರ್ತಿ ವಿರುದ್ಧ ದೂರು ದಾಖಲಾಗಿತ್ತು.

- - -

ಬಾಕ್ಸ್

ಕೃಷ್ಣಮೂರ್ತಿ ಸಿಕ್ಕಿಬಿದ್ದ ಘಟನೆ ಹಿನ್ನೋಟ ಬಿ.ಜಿ. ಕೃಷ್ಣಮೂರ್ತಿ ಮಲೆನಾಡು ತೊರೆದ ಬಳಿಕ ಕೇರಳದ ಗಡಿಭಾಗದಲ್ಲಿ ಸಕ್ರಿಯನಾಗಿದ್ದ. ಅಲ್ಲದೆ ಮೈಸೂರಿನಲ್ಲಿಯೇ ಹೆಚ್ಚು ಓಡಾಡಿಕೊಂಡಿದ್ದ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಆದರೆ ಆತನ ಇತ್ತೀಚಿನ ಭಾವಚಿತ್ರ ಪೊಲೀಸರ ಬಳಿ ಇರಲಿಲ್ಲ.ಈ ನಡುವೆ ಪೊಲೀಸರಿಗೆ ಶರಣಾದ ನಕ್ಸಲರು ಕೇರಳ ಪೊಲೀಸರಿಗೆ ಮಾಹಿತಿದಾರರಾಗಿ ಈತನ ಬಗ್ಗೆ ಸುಳಿವು ನೀಡಿದ್ದರು. ಮೈಸೂರು ಕೇರಳ ಗಡಿಭಾಗದ ಟ್ರೈ ಜಂಕ್ಷನ್ ಮಾರ್ಗವಾಗಿ ಬಿ.ಜಿ. ಕೃಷ್ಣಮೂರ್ತಿ ಕಾರಿನಲ್ಲಿ ಪಯಣಿಸುತ್ತಿರುವ ಮಾಹಿತಿ ಕೇರಳ ವೈನಾಡು ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಜಾಗೃತರಾದ ಪೊಲೀಸರು ಕಾರ್ಯತಂತ್ರ ರೂಪಿಸಿದ ಕೇರಳ ಪೊಲೀಸರ ವಿಶೇಷ ತಂಡ ಮಾರುವೇಷದಲ್ಲಿ ಶಸ್ತ್ರಸಜ್ಜಿಸಾಗಿ ಬಿ.ಜಿ. ಕೃಷ್ಣಮೂರ್ತಿಯನ್ನು ಹಿಂಬಾಲಿಸಿದ್ದರು. ಮುಂದೆ ಕಾರಿನಲ್ಲಿ ಸಾಗುತ್ತಿದ್ದ ಬಿಜಿಕೆ ಕಾರು ಇದ್ದಕ್ಕಿದ್ದ ಹಾಗೆ ಕೈ ಕೊಟ್ಟ ಸಂದರ್ಭದಲ್ಲಿ ಕೃಷ್ಣಮೂರ್ತಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ದಾರಿಹೋಕರ ಬಳಿ ಡ್ರಾಪ್ ಕೇಳುತ್ತಿದ್ದ. ಹಿಂಬದಿಯಿಂದ ಮಾರು ವೇಷದಲ್ಲಿ ಫಾಲೋ ಮಾಡಿಕೊಂಡ ಬಂದ ಪೊಲೀಸರು ವಾಹನ ಚಲಾಯಿಸಿಕೊಂಡು ಬಿಜಿಕೆ ಸನಿಹವೇ ಬಂದರು. ಬಿಜಿಕೆ ಆ ಮಾರುವೇಷದ ಪೊಲೀಸರಿಗೂ ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ. ಮಾರುವೇಷದ ಪೊಲೀಸರು ಬಿಜಿಕೆಗೆ ಡ್ರಾಪ್ ನೀಡಲು ಒಪ್ಪಿ ಕಾರು ಹತ್ತಿಸಿಕೊಂಡರು.

ಕಾರಿನಲ್ಲಿ ಸಾಗುತ್ತಿದ್ದಾಗಲೇ ತಾನು ಪೊಲೀಸರ ಬಂಧನಕ್ಕೆ ಒಳಗಾದೆ ಎಂದು ಕೃಷ್ಣಮೂರ್ತಿಗೆ ತಿಳಿಯಿತು. ಆದರೆ ಅದಾಗಲೇ ಕಾಲ ಮೀರಿತ್ತು. - - - -ಫೋಟೋ: ಶಂಕಿತ ನಕ್ಸಲ್ ಕೃಷ್ಣಮೂರ್ತಿ