ಹೊರ ರಾಜ್ಯದ ವಲಸೆ ಕಾರ್ಮಿಕರ ಬಗ್ಗೆ ಎಚ್ಚರ ಇರಲಿ: ಎಂ.ಸಿ. ಚಂದ್ರಶೇಖರ್

| Published : Sep 29 2024, 01:31 AM IST

ಸಾರಾಂಶ

ಹೊರ ರಾಜ್ಯಗಳಿಂದ ಬರುತ್ತಿರುವ ವಲಸೆ ಕಾರ್ಮಿಕರ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಎಂ.ಸಿ. ಚಂದ್ರಶೇಖರ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರಕಲಗೂಡಿನಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

- ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ - ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಹೊರ ರಾಜ್ಯಗಳಿಂದ ಬರುತ್ತಿರುವ ವಲಸೆ ಕಾರ್ಮಿಕರ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಎಂ.ಸಿ. ಚಂದ್ರಶೇಖರ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಲಸೆ ಕಾರ್ಮಿಕರ ಕುರಿತು ವ್ಯಾಪಕ ದೂರುಗಳು ಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಇವರ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ವಲಸೆ ಕಾರ್ಮಿಕರನ್ನು ಬೇರೆಡೆಗೆ ಕರೆತರುವವರು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪತ್ರ ಪಡೆಯಬೇಕು. ಅದೇ ರೀತಿ ಇಲ್ಲಿಗೆ ಬಂದವರು ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ ಕ್ರಮವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರ ವಹಿಸಬೇಕು. ಎಷ್ಟು ಜನ ಕಾರ್ಮಿಕರು ಇದ್ದಾರೆ, ಎಲ್ಲಿಂದ ಬಂದಿದ್ದಾರೆ, ಕರೆತಂದಿರುವವರು ಯಾರು ಈ ಕುರಿತು ಮಾಹಿತಿಗಳನ್ನು ದಾಖಲಿಸಬೇಕು. ಈ ಕುರಿತು ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿದೆ ಎಂದು ಎಚ್ಚರಿಸಿದರು. ತಾಲೂಕಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬರುತ್ತಿದ್ದಾರೆ. ಇವರನ್ನು ಕರೆತರುತ್ತಿರುವವರು ಯಾರು ಎಂಬ ಮಾಹಿತಿ ದೊರಕುತ್ತಿಲ್ಲ, ದಾಖಲಾತಿಗಳ ಪರಿಶೀಲನೆ ನಡೆಸಿರುವುದಾಗಿ ಕಾರ್ಮಿಕ ಇಲಾಖೆ ಅಧಿಕಾರಿ ರಘು ಮಾಹಿತಿ ನೀಡಿದರು.

ಅರಣ್ಯ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ನೀರಿನ ಹೊಂಡಗಳನ್ನು ನಿರ್ಮಿಸಿ ವನ್ಯ ಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ ಅವು ಜನವಸತಿ ಪ್ರದೇಶಗಳಿಗೆ ಬರುವುದು ಕಡಿಮೆಯಾಗುತ್ತದೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಂಡ್ಯದಲ್ಲಿ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯಿಂದಲೂ ಗರ್ಭಿಣಿಯರನ್ನು ಕರೆದೊಯ್ದು ಗರ್ಭಪಾತ ಮಾಡಿಸಿರುವ ಕುರಿತು ಸುದ್ದಿ ಇದ್ದು, ಈ ಕುರಿತು ಕಟ್ಟು ನಿಟ್ಟಿನ ಎಚ್ಚರ ವಹಿಸುವ ಜತೆಗೆ ಜನರಿಗೆ ಹೆಣ್ಣುಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಡೆಂಘೀ ಪ್ರಕರಣಗಳು ಕಡಿಮೆಯಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಸಭೆಗೆ ತಿಳಿಸಿದರು. ಪುರುಷರೂ ಸಹ ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಮನವೊಲಿಸುವಂತೆ ಆಡಳಿತಾಧಿಕಾರಿ ಚಂದ್ರಶೇಖರ್ ಸೂಚಿಸಿದರು. ತಾಲೂಕಲ್ಲಿ ರೇಬೀಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ, ಸೆ. 28ರಂದು ವಿಶ್ವ ರೆಬೀಸ್ ಮುಕ್ತ ದಿನಾಚರಣೆ ಪ್ರಯುಕ್ತ ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ ಹಾಕಲಾಗುವುದು ಎಂದು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ ಎ.ಡಿ.ಶಿವರಾಮ್ ತಿಳಿಸಿದರು. ಕಳೆದ ಸಾಲಿನ ಎಸ್. ಎಸ್.ಎಲ್ ಸಿ ಪರೀಕ್ಷೆಯ ಫಲಿತಾಂಶ ತೃಪ್ತಿಕರವಾಗಿಲ್ಲ. ಈಗಿನಿಂದಲೇ ಹೆಚ್ಚಿನ ಆಸಕ್ತಿ ವಹಿಸಿ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಹೆಣ್ಣುಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿ

ಮಂಡ್ಯದಲ್ಲಿ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯಿಂದಲೂ ಗರ್ಭಿಣಿಯರನ್ನು ಕರೆದೊಯ್ದು ಗರ್ಭಪಾತ ಮಾಡಿಸಿರುವ ಕುರಿತು ಸುದ್ದಿ ಇದ್ದು, ಈ ಕುರಿತು ಕಟ್ಟುನಿಟ್ಟಿನ ಎಚ್ಚರ ವಹಿಸುವ ಜತೆಗೆ ಜನರಿಗೆ ಹೆಣ್ಣುಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು.