ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಆಗದಂತೆ ಗಮನ ಹರಿಸಿ: ರೆಡ್ಡಿ ಶ್ರೀನಿವಾಸ

| Published : Jun 23 2024, 02:05 AM IST

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಅಪಪ್ರಚಾರವಾಗದಂತೆ ನೋಡಿಕೊಳ್ಳಬೇಕು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಹೇಳಿಕೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಅಪಪ್ರಚಾರವಾಗದಂತೆ ನೋಡಿಕೊಳ್ಳಿ ಎಂದು ಕೊಪ್ಪಳ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಚರ್ಚಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಸರ್ವರಿಗೂ ಸಮಬಾಳು, ಸಮಪಾಲು ನೀಡಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿದ್ದು, ಇವುಗಳು ಸಮರ್ಪಕ ಅನುಷ್ಠಾನವಾಗುತ್ತಿವೆ. ತಾಂತ್ರಿಕ ದೋಷಗಳಿಂದಾಗಿ ಕೆಲವರಿಗೆ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ದೊರಕಿಸಿಕೊಡಬೇಕು. ಗ್ಯಾರಂಟಿ ಯೋಜನೆಗಳು ನಿಲ್ಲಿಸುತ್ತಾರೆ ಎಂದು ಜನಸಾಮನ್ಯರಿಗೆ ಯಾವುದೇ ತಪ್ಪು ಮಾಹಿತಿ ಹೋಗಬಾರದು. ಈ ಹಿನ್ನೆಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆ ಇರುವುದು ಮತ್ತು ಇತರ ಸಣ್ಣಪುಟ್ಟ ಸಮಸ್ಯೆಗಳಿಂದಾಗಿ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ ವಯೋವೃದ್ಧರ ಹೆಬ್ಬೆರಳಿನ ಗುರುತಿನ ಸಮಸ್ಯೆಯಿಂದಾಗಿ ಕೆಲವರಿಗೆ ಈ ಯೋಜನೆಯಡಿ ಆಹಾರ ಧಾನ್ಯಗಳು ಸಿಗುತಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಂಡು ಎಲ್ಲರಿಗೂ ಸೌಲಭ್ಯ ನೀಡಬೇಕು. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಹಾಗೂ ಪಡಿತರ ಕಾರ್ಡಿನಲ್ಲಿರುವ ಪ್ರತಿ ಸದಸ್ಯರಿಗೆ ನೀಡುವ ಆಹಾರ ಸಾಮಾಗ್ರಿಗಳ ವಿವರವನ್ನೂ ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ 3,17,000 ಮಹಿಳೆಯರ ಪೈಕಿ ಮೇ ಮಾಹೆ ವರೆಗೆ 3,08,510 ಫಲಾನುಭವಿಗಳಿಗೆ ಯೋಜನೆಯ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ಶೇ. 97ರಷ್ಟು ಪ್ರಗತಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಇಲ್ಲಿ ವರೆಗೆ ಜಿಲ್ಲೆಯಲ್ಲಿ 3.8 ಕೋಟಿ ಮಹಿಳೆಯರು ಉಚಿತ ಪ್ರಮಾಣ ಮಾಡಿದ್ದು, ಶೇ. 57ರಷ್ಟು ಪ್ರಗತಿಯಾಗಿದೆ ಎಂದು ಕೆ.ಕೆ.ಆರ್.ಟಿ.ಸಿ. ಕೊಪ್ಪಳ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿ 2,89,000 ವಿದ್ಯುತ್ ಗ್ರಾಹಕರ ಪೈಕಿ ಗೃಹಜ್ಯೋತಿ ಯೋಜನೆಯಡಿ 2,72,000ಕ್ಕೂ ಅಧಿಕ ನೋಂದಣಿಯಾಗಿದ್ದು, 1,82,532 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಗೃಹಜ್ಯೋತಿಯಡಿ ಜಿಲ್ಲೆಯಲ್ಲಿ ಶೇ. 94ರಷ್ಟು ಪ್ರಗತಿಯಾಗಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ 3,27,110 ಬಿಪಿಎಲ್ ಕುಟುಂಬಗಳಿದ್ದು, ಇದರಲ್ಲಿ 3,04,215 ಬಿ.ಪಿ.ಎಲ್. ಕುಟುಂಬಗಳಿಗೆ ಪ್ರತಿ ಮಾಹೆಯಲ್ಲಿ 5 ಕೆ.ಜಿ. ಅಕ್ಕಿ ಮತ್ತು ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಯುವನಿಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಪದವಿ ಹಾಗೂ ಡಿಪ್ಲೋಮಾ ಪದವಿ ಪೂರ್ಣಗೊಳಿಸಿದ 4,600 ಅಭ್ಯರ್ಥಿಗಳ ಪೈಕಿ 4,502 ಜನರು ನೋಂದಾಯಿಸಿಕೊಂಡಿದ್ದು, ಮೇ ಮಾಹೆಯಲ್ಲಿ 1,752 ನಿರುದ್ಯೋಗಿ ಯುವಕರಿಗೆ ಸಹಾಯಧನ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ತಾಪಂ ಇಒಗಳು ಇದ್ದರು.