ವಿಷಬೀಜ ಬಿತ್ತುವ ಮನಸ್ಥಿತಿ ವಿರುದ್ಧ ಇರಲಿ ಎಚ್ಚರಿಕೆ: ಸು. ರಾಮಣ್ಣ

| Published : Feb 01 2025, 12:01 AM IST

ಸಾರಾಂಶ

ಭಾರತ ಮಾತೆ ಮತ್ತು ಭುವನೇಶ್ವರಿ ದೇವಿಯ ಕಲ್ಪನೆ ನಮ್ಮ ದೇಶದ ಸಂಸ್ಕೃತಿಗೆ ಅನುಗುಣವಾಗಿ ಕಲ್ಪಿಸಿ ಮಾಡಲಾಗಿದೆ. ಅನೇಕ ವರ್ಷಗಳಿಂದ ತಪ್ಪಾಗಿ ವ್ಯಖ್ಯಾನ ಮಾಡುವ ಕೆಲಸವನ್ನು ಸಮಾಜ ವಿಘಟಕರು ಮಾಡಿದ್ದಾರೆ.

ಧಾರವಾಡ:

ಪಠ್ಯ ಪುಸ್ತಕದಲ್ಲಿ ದೇಶ ವಿರೋಧಿ, ಸಂವಿಧಾನ ವಿರೋಧಿ ವಿಷಯ ಸೇರಿಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶದ ಏಕತೆಯ ವಿಷಯದಲ್ಲಿ ವಿಷಬೀಜ ಬಿತ್ತುವ ಮನಸ್ಥಿತಿಗಳ ವಿರುದ್ಧ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಬಿಎ ಪ್ರಥಮ ಸೆಮಿಸ್ಟರ್‌ ಬೆಳಗು ಪಠ್ಯದಲ್ಲಿ ದೇಶ ವಿರೋಧಿ​ ವಿಷಯ ಸೇರಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಶುಕ್ರವಾರ ಕವಿವಿ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾರತ ಮಾತೆ ಹಾಗೂ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು, ಭಾರತ ಮಾತೆ ಮತ್ತು ಭುವನೇಶ್ವರಿ ದೇವಿಯ ಕಲ್ಪನೆ ನಮ್ಮ ದೇಶದ ಸಂಸ್ಕೃತಿಗೆ ಅನುಗುಣವಾಗಿ ಕಲ್ಪಿಸಿ ಮಾಡಲಾಗಿದೆ. ಅನೇಕ ವರ್ಷಗಳಿಂದ ತಪ್ಪಾಗಿ ವ್ಯಖ್ಯಾನ ಮಾಡುವ ಕೆಲಸವನ್ನು ಸಮಾಜ ವಿಘಟಕರು ಮಾಡಿದ್ದಾರೆ ಎಂದರು.

ಭಾರತ ಮಾತಾಕಿ ಜೈ ಘೋಷಣೆ ಇಂದು ನಿನ್ನೆಯದಲ್ಲ. ಶ್ರೀರಾಮನ ಕಾಲದಿಂದ ಬಂದಿದೆ. ಭಾರತ ಮಾತೆಯನ್ನು ಸೆಕ್ಯೂಲರ್‌ ಮಾಡುವ ಪ್ರಯತ್ನ ಮಾಡಬೇಡಿ. ಸೆಕ್ಯೂಲರ್‌ ಎಂಬುವ ಪದವೇ ಸಂಸ್ಕೃತಿಗೆ ವಿರುದ್ಧವಾದದ್ದು. ನಾವೆಲ್ಲರೂ ಈ ಭಾರತ ಭೂಮಿಯ ಆಸ್ಮಿತೆಯ ಉಳಿವಿಗೆ ಕಾರ್ಯ ಮಾಡಲೇಬೇಕು ಎಂದರು.

ಎಬಿವಿಪಿ ರಾಜ್ಯಾಧ್ಯಕ್ಷ ಡಾ. ಆನಂದ ಹೊಸೂರು ಮಾತನಾಡಿ, ದೇಶದ ವಿಚಾರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಎಬಿವಿಪಿ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತದೆ. ವಿದ್ಯಾರ್ಥಿಗಳಲ್ಲಿ ಸಮಾಜ ಘಾತುಕ ಶಕ್ತಿಗಳು ಎಷ್ಟೇ ದೇಶ ವಿರೋಧಿ ಭಾವನೆ ಭಿತ್ತಿದರೂ, ಎಬಿವಿಪಿ ಮಾತ್ರ ದೇಶಾಭಿಮಾನ ಬಿತ್ತುವ ಕೆಲಸ ಮಾಡುತ್ತದೆ ಎಂದರು.

ಶಾಸಕ ಅರವಿಂದ ಬೆಲ್ಲದ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌, ಶಂಕರ್‌ ಕುಂದಗೋಳ, ಶಿವು ಹಿರೇಮಠ, ಜ್ಯೋತಿ ಪಾಟೀಲ, ಸುಧೀಂದ್ರ ದೇಶಪಾಂಡೆ, ಮಣಿಕಂಠ ಕಳಸ, ಅರುಣ ಅಮರಗೋಳ, ಉಲ್ಲಾಸ ಗೋಡಿ, ಭೀಮಣ್ಣ, ರಾಘವೇಂದ್ರ ದೇಶಪಾಂಡೆ, ಗುರು ಅಯ್ಯನಗೌಡ, ಮುರಳಿ ಶೆಟ್ಟಿ, ಸೋಹಾನ್‌, ಸಚಿನ್‌ ಇದ್ದರು.